ಕರ್ನಾಟಕ

karnataka

By ETV Bharat Karnataka Team

Published : Oct 19, 2023, 12:54 PM IST

ETV Bharat / international

ಬೈಡನ್​ ಹೋದರು.. ಸುನಕ್​ ಬಂದರು... ಇಸ್ರೇಲ್‌ನ ಟೆಲ್ ಅವಿವ್‌ಗೆ ಆಗಮಿಸಿದ ಇಂಗ್ಲೆಂಡ್​ ಪ್ರಧಾನಿ!

Rishi Sunak To Visit Israel: ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಇಂದು (ಗುರುವಾರ) ಇಸ್ರೇಲ್‌ನ ಟೆಲ್ ಅವಿವ್‌ಗೆ ಆಗಮಿಸಿದರು. ಇಸ್ರೇಲ್‌ಗೆ ಭೇಟಿ ನೀಡುವ ಮೊದಲು ಸುನಕ್ ಅವರು, ಗಾಜಾದ ಜನರಿಗೆ ಮಾನವೀಯ ನೆರವು ಒದಗಿಸಲು ಒತ್ತಾಯ ಮಾಡಿದ್ದರು.

Rishi Sunak To Visit Israel
ಇಸ್ರೇಲ್‌ನ ಟೆಲ್ ಅವಿವ್‌ಗೆ ಆಗಮಿಸಿದ ಇಂಗ್ಲೆಂಡ್​ ಪ್ರಧಾನಿ ರಿಷಿ ಸುನಕ್...

ಇಸ್ರೇಲ್‌:ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಇಂದು (ಗುರುವಾರ) ಇಸ್ರೇಲ್‌ನ ಟೆಲ್ ಅವಿವ್‌ ಪ್ರದೇಶಕ್ಕೆ ಆಮಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ನಡುವೆ ಇಸ್ರೇಲ್​ನ ನಾಯಕರೊಂದಿಗೆ ಮಾತಕತೆ ನಡೆಸಲಿದ್ದಾರೆ. ಇಸ್ರೇಲ್‌ನೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಅವರು ಇಸ್ರೇಲ್‌ಗೆ ಭೇಟಿ ಕೈಗೊಂಡಿದ್ದಾರೆ ಎಂದು ಸುನಕ್ ಅವರ ಕಚೇರಿ ತಿಳಿಸಿದೆ.

ಪ್ರಧಾನಿ ಕಚೇರಿಯ ಪ್ರಕಾರ, ಸುನಕ್ ಇಸ್ರೇಲಿ ಪಿಎಂ ಬೆಂಜಮಿನ್ ನೆತನ್ಯಾಹು ಮತ್ತು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಭೇಟಿಯಾಗಲಿದ್ದಾರೆ. ಅವರ ಭೇಟಿಯ ಸಮಯದಲ್ಲಿ, ಅವರು ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಯ ನಂತರ ಇಸ್ರೇಲ್ ಮತ್ತು ಗಾಜಾದಲ್ಲಿ ಜೀವ ಹಾನಿ ಮತ್ತು ಆಸ್ತಿ ನಷ್ಟಕ್ಕೆ ಸಂತಾಪ ಸೂಚಿಸಲಿದ್ದಾರೆ.

ರಾಯಿಟರ್ಸ್ ವರದಿ ಪ್ರಕಾರ, ''ಭೇಟಿಯ ಮೊದಲು ಸುನಕ್ ತಮ್ಮ ಹೇಳಿಕೆಯಲ್ಲಿ, ಪ್ರತಿಯೊಬ್ಬ ನಾಗರಿಕನ ಸಾವು ದುರಂತವೇ ಆಗಿದೆ. ಹಮಾಸಿಗರ ಭೀಕರ ಕೃತ್ಯದಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ'' ಎಂದು ಸುನಕ್ ಹೇಳಿದ್ದಾರೆ. ಸಾಧ್ಯವಾದಷ್ಟು ಬೇಗ ಗಾಜಾಕ್ಕೆ ಮಾನವೀಯ ಸಹಾಯ ಒದಗಿಸಲು ಅನುಮತಿ ನೀಡಬೇಕು. ಗಾಜಾದಲ್ಲಿ ಸಿಲುಕಿರುವ ಬ್ರಿಟಿಷ್ ನಾಗರಿಕರ ತಮ್ಮ ದೇಶಕ್ಕೆ ಕರೆತರಲು ಅಗತ್ಯವಿರುವ ಮಾರ್ಗವನ್ನು ತೆರೆಯಲು ಅವರು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಇದಕ್ಕೂ ಮೊದಲು, ಸಾಮಾಜಿಕ ಜಾಲತಾಣವಾದ 'ಎಕ್ಸ್‌'ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಗಾಜಾ ಆಸ್ಪತ್ರೆಯ ಮೇಲಿನ ದಾಳಿ ನಡೆಸಿ ನೂರಾರು ಜನರನ್ನು ಹತ್ಯೆ ಮಾಡಿರುವ ಘಟನೆಯನ್ನು ಸುನಕ್ ಖಂಡಿಸಿದ್ದಾರೆ.

''ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿನ ದೃಶ್ಯಗಳಿಂದ ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ'' ಎಂದು ಅವರು ಎಕ್ಸ್​​​ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ಹೇಳಿದ್ದಾರೆ. ನಮ್ಮ ಗುಪ್ತಚರ ಸೇವೆಗಳು ಸತ್ಯ, ಪುರಾವೆಗಳನ್ನು ತ್ವರಿತವಾಗಿ ವಿಶ್ಲೇಷಿಸುತ್ತಿವೆ. ನಿತ್ಯವೂ ಯುದ್ಧವು ಹೆಚ್ಚು ಕ್ರೂರವಾಗುತ್ತಿರುವುದರಿಂದ ಎರಡೂ ಕಡೆಯಿಂದಲೂ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ. ಯುದ್ಧ ಆರಂಭೊಗೊಳ್ಳುತ್ತಿದ್ದಂತೆ ಕದನ ವಿರಾಮಕ್ಕೆ ಅಂತಾರರಾಷ್ಟ್ರೀಯ ಸಮುದಾಯ ಒತ್ತಡ ಹಾಕಿದೆ. ದೀರ್ಘಾವಧಿಯ ಇಸ್ರೇಲಿ - ಪ್ಯಾಲೆಸ್ಟಿನಿಯನ್ ಸಂಘರ್ಷವನ್ನು ಪರಿಹರಿಸಲು ಮಾತುಕತೆ ನಡೆಸಬೇಕಿದೆ ಎಂದು ಸುನಕ್​ ಇದೇ ವೇಳೆ ಪ್ರತಿಪಾದಿಸಿದ್ದಾರೆ.

ಮಂಗಳವಾರ, ಇಸ್ರೇಲಿ ಪ್ರಧಾನಿ ನೆತನ್ಯಾಹು ಅವರ ವಕ್ತಾರ ಟಾಲ್ ಹೆನ್ರಿಚ್ ಅವರು, ಐಡಿಎಫ್ ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸಿಎನ್‌ಎನ್‌ಗೆ ತಿಳಿಸಿದ್ದರು. ನಾವು ಹಮಾಸ್ ಭದ್ರಕೋಟೆಗಳು, ಶಸ್ತ್ರಾಸ್ತ್ರ ಡಿಪೋಗಳು ಮತ್ತು ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ ಎಂದು ಅವರು ಸ್ಪಷ್ಟ ಪಡಿಸಿದ್ದರು.

ಇಸ್ರೇಲ್ ಭೇಟಿ ಬಳಿಕ ಅಮೆರಿಕಕ್ಕೆ ಮರಳಿದ ಬೈಡೆನ್​: ನಿನ್ನೆ ಇಸ್ರೇಲ್​ ಪ್ರವಾಸ ಕೈಗೊಂಡಿದ್ದ ಅಮೆರಿಕ ಅಧ್ಯಕ್ಷ ಬೈಡನ್​ ಅಮೆರಿಕಕ್ಕೆ ವಾಪಸ್ ಆಗಿದ್ದಾರೆ. ಗಾಜಾದಲ್ಲಿ ಸಿಲುಕಿರುವ ನಾಗರಿಕರ ಸಂಕಷ್ಟಗಳನ್ನು ನಿವಾರಿಸುವ ಮಾರ್ಗಗಳನ್ನು ಇಸ್ರೇಲ್ ಕೂಡ ಅನ್ವೇಷಿಸಬೇಕು ಎಂದು ಬೈಡನ್ ಇದೇ ವೇಳೆ ಸಲಹೆ ಕೂಡಾ ನೀಡಿದ್ದಾರೆ. ಹಮಾಸ್ ವಿರುದ್ಧ ಹೋರಾಡುತ್ತಿರುವ ಇಸ್ರೇಲ್​ಗೆ ಸಂಪೂರ್ಣ ಬೆಂಬಲ ಘೋಷಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟೆಲ್ ಅವೀವ್​ಗೆ ಭೇಟಿ ನೀಡಿದ್ದರು. ಇದರ ಭಾಗವಾಗಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿದರು. ''ಇಸ್ರೇಲ್ ತೀವ್ರವಾಗಿ ಹಾನಿಗೊಳಗಾಗಿದೆ. ಆದಾಗ್ಯೂ, ಗಾಜಾದ ಜನರ ನೋವನ್ನು ನಿವಾರಿಸುವ ಮಾರ್ಗಗಳನ್ನು ಇಸ್ರೇಲ್ ಸಹ ಅನ್ವೇಷಿಸಬೇಕು'' ಎಂದು ಅವರು ಸಲಹೆ ನೀಡಿದರು.

ಇಸ್ರೇಲ್‌ಗೆ ಭೇಟಿ ನೀಡಿದ ನಂತರ, ಬೈಡನ್ ವಾಷಿಂಗ್ಟನ್‌ಗೆ ಮರಳಿದರು. ''ಗಾಜಾದಿಂದ ಎಲ್ಲಿಯೂ ಹೋಗಲಾಗದ ಮುಗ್ಧ ನಾಗರಿಕರ ಸಂಕಷ್ಟವನ್ನು ನಿವಾರಿಸಲು ಇಸ್ರೆಲ್​ನವರಿಗೆ ಅವಕಾಶವಿದ್ದರೆ, ಅವರು ಆ ದಿಕ್ಕಿನಲ್ಲಿ ಹೆಜ್ಜೆಗಳನ್ನು ಇಡಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಏನಾಗುತ್ತದೆಯೋ ಅದಕ್ಕೆ ಅವರೇ ಹೊಣೆಯಾಗುತ್ತಾರೆ. ಅದು ಬಹುಶಃ ಅನ್ಯಾಯವಾಗುತ್ತದೆ. ನಾನಿಲ್ಲಿ ಹೇಳುವುದು ಇಷ್ಟೇ. ಯಾರಿಗಾದರೂ ನೋವು ಕಡಿಮೆ ಮಾಡಲು ಅವಕಾಶವಿದ್ದರೆ, ಅದನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಜಗತ್ತಿನ ದೃಷ್ಟಿಯಲ್ಲಿ ನಾವು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತೇವೆ. ಪ್ರತಿಯೊಬ್ಬರೂ ಇದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ'' ಎಂದು ಬೈಡನ್​ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಹಮಾಸ್​ ಉಗ್ರ ಗುಂಪುಗಳ ಹಣಕಾಸು ಜಾಲಗಳಿಗೆ ನಿರ್ಬಂಧ: ಗಾಜಾ, ವೆಸ್ಟ್‌ ಬ್ಯಾಂಕ್‌ಗೆ $100 ಮಿಲಿಯನ್​ ನೆರವು ಘೋಷಿಸಿದ ಅಮೆರಿಕ

ABOUT THE AUTHOR

...view details