ಟೆಲ್ ಅವೀವ್ : ಇಸ್ರೇಲ್ ಮತ್ತು ಹಮಾಸ್ ನಡುವೆ ಕದನವಿರಾಮ ಮೂಡಿಸಲು ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಆರಂಭವಾದ ಮಾತುಕತೆಗಳು ಯಾವುದೇ ಫಲ ನೀಡಲು ವಿಫಲವಾಗಿವೆ. ಉಭಯ ದೇಶಗಳು ಪರಸ್ಪರರ ಬೇಡಿಕೆಗಳಿಗೆ ಒಪ್ಪಲು ನಿರಾಕರಿಸಿದ್ದರಿಂದ ಮಾತುಕತೆಗಳಿಗೆ ಅಡ್ಡಿಯಾಗಿದೆ. ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಸೋಮವಾರ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಮತ್ತು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ಅವರನ್ನು ವಾರ್ಸಾದಲ್ಲಿ ಭೇಟಿಯಾದ ನಂತರವೂ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ.
ಇಸ್ರೇಲ್ ಸೇನಾ ಪಡೆಗಳು ನಿರ್ದಿಷ್ಟ ಸ್ಥಾನಕ್ಕೆ ಮರಳಬೇಕು ಎಂಬ ಷರತ್ತನ್ನು ಹಮಾಸ್ ಉಗ್ರಗಾಮಿ ಗುಂಪು ಮುಂದಿಟ್ಟಿದೆ. ಆದರೆ ಷರತ್ತನ್ನು ಒಪ್ಪಲಾಗದು ಎಂದು ಇಸ್ರೇಲ್ ಸರ್ಕಾರದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯು ತನ್ನ ನೆಲದ ದಾಳಿಯನ್ನು ನಿಲ್ಲಿಸುವವರೆಗೂ ಯಾವುದೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗದು ಎಂದು ಹಮಾಸ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿತ್ತು. ಮೂಲಗಳ ಪ್ರಕಾರ, ಹಮಾಸ್ ಸೂಚಿಸುವ ಬಂಧಿಗಳನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಇಸ್ರೇಲ್ ಮುಕ್ತವಾಗಿದೆ.
ನವೆಂಬರ್ 24 ರಿಂದ ಡಿಸೆಂಬರ್ 1 ರವರೆಗೆ ಜಾರಿಯಲ್ಲಿದ್ದ ಮಾನವೀಯ ಕದನ ವಿರಾಮದ ಸಮಯದಲ್ಲಿ ಇಸ್ರೇಲ್ ತಾನು ಬಯಸಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸಿಕೊಳ್ಳುವ ಆಯ್ಕೆಯನ್ನು ಹೊಂದಿತ್ತು. ಇಸ್ರೇಲ್ ಮತ್ತು ಹಮಾಸ್ಗಳು ಮುಂದಿಟ್ಟ ಭಿನ್ನಾಭಿಪ್ರಾಯಗಳನ್ನು ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಸರಿಯಾಗಿ ಪರಿಹರಿಸಿದ ನಂತರವೇ ಮುಂದಿನ ಹಂತದ ಮಾತುಕತೆಗಳು ಪ್ರಾರಂಭವಾಗಲಿವೆ ಎಂದು ಇಸ್ರೇಲ್ ಸರ್ಕಾರಿ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.