ಕರ್ನಾಟಕ

karnataka

ETV Bharat / international

ಹಮಾಸ್ ಸುರಂಗಗಳಲ್ಲಿ ಸಮುದ್ರದ ನೀರು ನುಗ್ಗಿಸಲಾರಂಭಿಸಿದ ಇಸ್ರೇಲ್ - ಇಸ್ರೇಲ್ ರಕ್ಷಣಾ ಪಡೆ

ಹಮಾಸ್ ಉಗ್ರರ ಸುರಂಗಗಳಲ್ಲಿ ಸಮುದ್ರದ ನೀರು ನುಗ್ಗಿಸಲು ಇಸ್ರೇಲ್ ಕಾರ್ಯಾಚರಣೆ ಆರಂಭಿಸಿದೆ.

Israel begins pumping sea water into Hamas tunnels
Israel begins pumping sea water into Hamas tunnels

By ETV Bharat Karnataka Team

Published : Dec 13, 2023, 5:55 PM IST

ವಾಷಿಂಗ್ಟನ್​ :ಹಮಾಸ್ ಉಗ್ರಗಾಮಿಗಳು ನಿರ್ಮಿಸಿಕೊಂಡಿರುವ ಭೂಗತ ಸುರಂಗ ಜಾಲವನ್ನು ದೊಡ್ಡ ಪ್ರಮಾಣದಲ್ಲಿ ನಾಶ ಮಾಡುವ ಪ್ರಯತ್ನವಾಗಿ ಗಾಜಾದ ಕೆಲ ಸುರಂಗಗಳನ್ನು ಸೀಮಿತ ಆಧಾರದ ಮೇಲೆ ಸಮುದ್ರದ ನೀರಿನಿಂದ ಎಚ್ಚರಿಕೆಯಿಂದ ತುಂಬಿಸಿ ಪರೀಕ್ಷಿಸಲಾಗುತ್ತಿದೆ ಎಂದು ಇಸ್ರೇಲ್ ವಾಷಿಂಗ್ಟನ್​ಗೆ ತಿಳಿಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸುರಂಗಗಳಿಗೆ ಸಮುದ್ರದ ನೀರು ತುಂಬಿಸುವ ತಂತ್ರಗಾರಿಕೆ ಯಶಸ್ವಿಯಾಗುತ್ತಾ ಎಂಬ ಬಗ್ಗೆ ಇಸ್ರೇಲ್ ಪಡೆಗಳಿಗೆ ಇನ್ನೂ ಖಚಿತವಿಲ್ಲ ಎಂದು ಅಧಿಕಾರಿ ಮಂಗಳವಾರ ಸಿಎನ್ಎನ್​ಗೆ ತಿಳಿಸಿದರು.

ಒತ್ತೆಯಾಳುಗಳನ್ನು ಇರಿಸಿಲ್ಲ ಎಂದು ಖಚಿತಪಟ್ಟ ಸುರಂಗಗಳಿಗೆ ಮಾತ್ರ ಸಮುದ್ರದ ನೀರು ನುಗ್ಗಿಸುವ ಪರೀಕ್ಷೆ ನಡೆಸಲು ಇಸ್ರೇಲ್ ಯೋಜಿಸಿದೆ ಎಂದು ಇಸ್ರೇಲ್ ಅಮೆರಿಕಕ್ಕೆ ಭರವಸೆ ನೀಡಿದೆ.

ಮಂಗಳವಾರ ರಾತ್ರಿ ಈ ಬೆಳವಣಿಗೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, "ಸುರಂಗಗಳಲ್ಲಿ ಪ್ರವಾಹ ಉಂಟು ಮಾಡುವುದಕ್ಕೆ ಸಂಬಂಧಿಸಿದಂತೆ ನನಗೆ ತಿಳಿದಿಲ್ಲ. ಆದರೆ ಆ ಯಾವುದೇ ಸುರಂಗಗಳಲ್ಲಿ ಒತ್ತೆಯಾಳುಗಳು ಇಲ್ಲ ಎಂದು ಅವರು ಖಚಿತಪಡಿಸಿಕೊಂಡಿದ್ದಾರೆ. ಆದರೆ ಅದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ" ಎಂದು ಹೇಳಿದರು.

ಈ ವರದಿಯ ಬಗ್ಗೆ ಇಸ್ರೇಲ್ ಸೇನೆ ಅಥವಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅಂತಾರಾಷ್ಟ್ರೀಯ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಈ ತಿಂಗಳ ಆರಂಭದಲ್ಲಿ ಇಸ್ರೇಲ್ ಸೇನೆಯು ಗಾಜಾದಲ್ಲಿ ಕನಿಷ್ಠ 500 ಸುರಂಗ ಶಾಫ್ಟ್​ಗಳನ್ನು ನಾಶಪಡಿಸಿದೆ ಮತ್ತು ಹಮಾಸ್ ನಿಯಂತ್ರಿತ ಪ್ರದೇಶದಲ್ಲಿ ಸುಮಾರು 800ಕ್ಕೂ ಹೆಚ್ಚು ಸುರಂಗ ಮಾರ್ಗಗಳು ಪತ್ತೆಯಾಗಿವೆ ಎಂದು ಹೇಳಿತ್ತು. ಸುರಂಗದ ಅನೇಕ ಪ್ರವೇಶ ಮಾರ್ಗಗಳು ವಸತಿ ಪ್ರದೇಶಗಳಲ್ಲಿ ಹಾಗೂ ಮನೆಗಳ ಒಳಗಡೆ ಇವೆ ಎಂದು ಮಿಲಿಟರಿ ಕಳೆದ ವಾರ ಹೇಳಿದೆ. ಗಾಜಾ ಅಡಿ 500 ಕಿ.ಮೀ ಉದ್ದದ ಸುರಂಗಗಳನ್ನು ನಿರ್ಮಿಸಿರುವುದಾಗಿ 2021ರಲ್ಲಿ ಹಮಾಸ್ ಹೇಳಿಕೊಂಡಿತ್ತು. ಆದರೆ, ಇದೆಷ್ಟು ಸತ್ಯ ಎಂಬುದು ತಿಳಿದಿಲ್ಲ.

ಉತ್ತರ ಗಾಜಾದಲ್ಲಿ ನಡೆದ ಸಂಘರ್ಷದಲ್ಲಿ ತನ್ನ 10 ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಬುಧವಾರ ತಿಳಿಸಿದೆ. ಇದರೊಂದಿಗೆ ಯುದ್ಧದಲ್ಲಿ ಮೃತಪಟ್ಟ ಇಸ್ರೇಲಿ ಸೈನಿಕರ ಸಂಖ್ಯೆ 115 ಕ್ಕೆ ಏರಿದೆ. ಏತನ್ಮಧ್ಯೆ ಮಾನವೀಯ ಕದನ ವಿರಾಮಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್​ಜಿಎ) ನೀಡಿದ ಕರೆಯನ್ನು ಹಮಾಸ್ ಉಗ್ರಗಾಮಿ ಗುಂಪು ಬುಧವಾರ ಸ್ವಾಗತಿಸಿದೆ.

ಇದನ್ನೂ ಓದಿ : ಭೀಕರ ಬರ; ಜಿಂಬಾಬ್ವೆಯ ಹ್ವಾಂಗೆ ರಾಷ್ಟ್ರೀಯ ಉದ್ಯಾನದಲ್ಲಿ 100 ಆನೆಗಳ ಸಾವು

ABOUT THE AUTHOR

...view details