ಕರ್ನಾಟಕ

karnataka

ETV Bharat / international

ನಾಲ್ಕು ದಿನಗಳ ಕದನ ವಿರಾಮಕ್ಕೆ ಒಪ್ಪಿದ ಇಸ್ರೇಲ್‌; 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ನಿರ್ಧಾರ

Israel approves ceasefire: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿದೆ. ಇದರಂತೆ 50 ಇಸ್ರೇಲಿಗಳನ್ನು ಹಮಾಸ್ ಬಿಡುಗಡೆಗೊಳಿಸಲಿದೆ. ಇಸ್ರೇಲ್ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ಇದೇ ವೇಳೆ, ಹಮಾಸ್‌ ಮಟ್ಟ ಹಾಕುವ ಪ್ರತಿಜ್ಞೆಯನ್ನು ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು ಪುನರುಚ್ಛರಿಸಿದ್ದಾರೆ.

Israel approves ceasefire with Hamas
ಹಮಾಸ್ ಜೊತೆಗೆ ತಾತ್ಕಾಲಿಕ ಕದನ ವಿರಾಮ ಅನುಮೋದಿಸಿದ ಇಸ್ರೇಲ್: ಹಮಾಸ್​ನಿಂದ 50 ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ

By ETV Bharat Karnataka Team

Published : Nov 22, 2023, 11:33 AM IST

ಜೆರುಸಲೇಂ: ಹಮಾಸ್ ಉಗ್ರರ ಗುಂಪಿನೊಂದಿಗೆ ತಾತ್ಕಾಲಿಕ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿತು. ಇದರಿಂದಾಗಿ ಕಳೆದ ಆರು ವಾರಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯುದ್ಧಕ್ಕೆ ತಾತ್ಕಾಲಿಕ ತಡೆ ಬೀಳಲಿದೆ. ಇಸ್ರೇಲ್ ಜೈಲಿನಲ್ಲಿರುವ ಹಾಗೂ ಗಾಜಾ ಪಟ್ಟಿಯಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಈ ಒಪ್ಪಂದದ ಅಡಿಯಲ್ಲಿ, ಹಮಾಸ್ ನಾಲ್ಕು ದಿನಗಳ ಅವಧಿಯಲ್ಲಿ ಗಾಜಾ ಪಟ್ಟಿಯಲ್ಲಿರುವ ಸುಮಾರು 240 ಒತ್ತೆಯಾಳುಗಳ ಪೈಕಿ 50 ಜನರನ್ನು ಬಿಡುಗಡೆ ಮಾಡಲಿದೆ. ಹೀಗೆ ಬಿಡುಗಡೆಗೊಳಿಸಲಾಗುವ ಒತ್ತೆಯಾಳುಗಳಲ್ಲಿ ಪ್ರಮುಖವಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಇಸ್ರೇಲ್​ ಸರ್ಕಾರ ಬುಧವಾರ ತಿಳಿಸಿದೆ. ಕದನ ವಿರಾಮ ಅಂತ್ಯಗೊಂಡ ನಂತರ ಇಸ್ರೇಲ್ ಹಮಾಸ್ ವಿರುದ್ಧ ತನ್ನ ಆಕ್ರಮಣವನ್ನು ಪುನರಾರಂಭಿಸಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ನೆತನ್ಯಾಹು ಮಂಗಳವಾರ ತಡರಾತ್ರಿ ತಮ್ಮ ಸಂಪುಟ ಸಭೆ ಕರೆದಿದ್ದರು. ತಮ್ಮ ಗುರಿ ತಲುಪುವ ಮೊದಲು ಹಮಾಸ್ ವಿರುದ್ಧದ ಇಸ್ರೇಲಿ ದಾಳಿಗಳನ್ನು ಸ್ಥಗಿತಗೊಳಿಸುವ ನಿರ್ಣಯದ ಸೂಕ್ಷ್ಮತೆಯನ್ನು ಒತ್ತಿಹೇಳುವ ಸಭೆ ಇದಾಗಿತ್ತು. ಮತದಾನಕ್ಕೂ ಮೊದಲು, ನೆತನ್ಯಾಹು ಸರ್ಕಾರದ ಸಚಿವರುಗಳಿಗೆ ಕದನ ವಿರಾಮ ಮಾತ್ರ ಕಾರ್ಯತಂತ್ರವಾಗಿದೆ ಎಂದು ಭರವಸೆ ನೀಡಲು ಪ್ರಯತ್ನಿಸಿದರು. ಕದನ ವಿರಾಮ ಕೊನೆಗೊಂಡ ನಂತರ ಯುದ್ಧವನ್ನು ಪುನರಾರಂಭಿಸಲು ಅವರು ಪ್ರತಿಜ್ಞೆ ಮಾಡಿದರು. ಉನ್ನತ ಭದ್ರತಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

"ನಾವು ಹೋರಾಟ ಮುಂದುವರಿಸುತ್ತೇವೆ. ನಮ್ಮೆಲ್ಲಾ ಗುರಿಗಳನ್ನೂ ಸಾಧಿಸುವವರೆಗೆ ಯುದ್ಧ ಮುಂದುವರಿಯುತ್ತೇವೆ. ಇಸ್ರೇಲ್ ಹಮಾಸ್‌ನ ಮಿಲಿಟರಿ ಸಾಮರ್ಥ್ಯವನ್ನು ನಾಶಪಡಿಸುವವರೆಗೆ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಹಿಂದಿರುಗಿಸುವವರೆಗೂ ಯುದ್ಧ ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಲಾಗಿದೆ. ಶಾಂತಿ ಕಾಲದಲ್ಲಿ ಗುಪ್ತಚರ ಪ್ರಯತ್ನಗಳು ಮುಂದುವರಿಯುತ್ತವೆ'' ಎಂದು ನೆತನ್ಯಾಹು ಪುನರುಚ್ಛರಿಸಿದ್ದಾರೆ.

''ಕದನ ವಿರಾಮ ಮುಂದಿನ ಹಂತದ ಹೋರಾಟಕ್ಕೆ ಸೇನೆಯನ್ನು ಸಿದ್ಧಪಡಿಸಲು ಅನುವು ಮಾಡಿಕೊಡುತ್ತದೆ. ಉತ್ತರ ಗಾಜಾದ ನಗರ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಸೈನಿಕರು ಪ್ಯಾಲೆಸ್ಟೀನಿಯನ್​ ಜೊತೆ ಹೋರಾಡುತ್ತಿರುವಾಗ ಮತ್ತು ಆಶ್ರಯ ಪಡೆಯುವ ರೋಗಿಗಳು ಮತ್ತು ಕುಟುಂಬಗಳಿಂದ ತುಂಬಿದ ಆಸ್ಪತ್ರೆಗಳ ಸುತ್ತಲೂ ಈ ಘೋಷಣೆ ಅನ್ವಯವಾಗಲಿದೆ. ಈ ಒಪ್ಪಂದವು ಸಂಘರ್ಷದ ಅಂತ್ಯವನ್ನು ಅರ್ಥೈಸುವುದಿಲ್ಲ'' ಎಂದು ಅವರು ಹೇಳಿದರು.

ಇಸ್ರೇಲ್-ಹಮಾಸ್ ಕದನ ವಿರಾಮ-ಖಚಿತಪಡಿಸಿದ ಕತಾರ್:ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿರುವುದನ್ನು ಕತಾರ್ ಅಧಿಕೃತವಾಗಿ ಖಚಿತಪಡಿಸಿದೆ. ಈಜಿಪ್ಟ್ ಮತ್ತು ಕೆಲವು ಅರಬ್ ರಾಷ್ಟ್ರಗಳು ಮತ್ತು ಅಮೆರಿಕದ ನಡುವಿನ ಮಾತುಕತೆಗಳು ಕೆಲವು ದಿನಗಳಿಂದ ಎರಡೂ ಕಡೆ (ಹಮಾಸ್-ಇಸ್ರೇಲ್) ಕತಾರ್ ಮಧ್ಯಸ್ಥಿಕೆಯಲ್ಲಿ ಯಶಸ್ವಿಯಾಗಿದೆ. ಅಕ್ಟೋಬರ್ 7ರಂದು ಹಮಾಸ್​ನವರು ದಕ್ಷಿಣ ಇಸ್ರೇಲ್‌ಗೆ ಗಡಿಯುದ್ದಕ್ಕೂ ದಾಳಿ ಮಾಡಿ ಕನಿಷ್ಠ 1,200 ಜನರನ್ನು ಕೊಂದು ಹಾಕಿದ ನಂತರ ಸಂಘರ್ಷ ಭುಗಿಲೆದ್ದಿತ್ತು. ಅದರಲ್ಲಿ 240ಕ್ಕೂ ಹೆಚ್ಚು ಜನರನ್ನು ಅಪಹರಿಸಲಾಗಿತ್ತು.

ಇದನ್ನೂ ಓದಿ:ಹಮಾಸ್​ ಭದ್ರಕೋಟೆ ಜಬಾಲಿಯಾ ಸುತ್ತುವರೆದ ಇಸ್ರೇಲ್ ಪಡೆಗಳು

ABOUT THE AUTHOR

...view details