ಟೆಲ್ ಅವಿವ್:ಗಾಜಾ ಪಟ್ಟಿಯಲ್ಲಿರುವ ಉಗ್ರಗಾಮಿ ಸಂಘಟನೆ ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ನ ಮತ್ತೊಬ್ಬ ಸೇನಾ ಮುಖ್ಯಸ್ಥ ಇಸ್ಲಾಮಿಕ್ ಜಿಹಾದ್‌ನ ದಕ್ಷಿಣದ ಕಮಾಂಡರ್ ಖಲೀದ್ ಮನ್ಸೂರ್ ರಾಫಾ ನಗರದಲ್ಲಿ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಕೊಂದು ಹಾಕಲಾಗಿದೆ ಎಂದು ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಗುಂಪು ಭಾನುವಾರ ತಿಳಿಸಿದೆ. ಮನ್ಸೂರ್ ಅವರ ಡೆಪ್ಯೂಟಿ ಸೇರಿದಂತೆ ಇಬ್ಬರು ಹಿರಿಯ ಪಿಐಜೆ ಸದಸ್ಯರನ್ನು ಸಹ ಈ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ.
ಗಾಜಾದ ಗಡಿಯಲ್ಲಿ ಇಸ್ರೇಲ್‌ನಲ್ಲಿ ಭಯೋತ್ಪಾದಕ ದಾಳಿಯ ಯೋಜನೆಗೆ ಕಾರಣರಾಗಿದ್ದ ಮನ್ಸೂರ್ ಇತ್ತೀಚೆಗೆ ಇಸ್ರೇಲ್‌ನಲ್ಲಿ ಆ್ಯಂಟಿ ಟ್ಯಾಂಕ್ ಕ್ಷಿಪಣಿ ಮತ್ತು ರಾಕೆಟ್ ದಾಳಿಯನ್ನು ನಡೆಸಲು ಕೆಲಸ ಮಾಡಿದ್ದರು. ಇದನ್ನು ಐಡಿಎಫ್ ವಿಫಲಗೊಳಿಸಿತ್ತು. ಅದಲ್ಲದೆ ಈ ಹಿಂದಿನ ಭಯೋತ್ಪಾದಕ ದಾಳಿಗಳಿಗೂ ಹೊಣೆಗಾರನಾಗಿದ್ದ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ಹೇಳಿವೆ.
ಇಸ್ರೇಲಿ ಮಿಲಿಟರಿ ಶುಕ್ರವಾರ PIJ ವಿರುದ್ಧ "ಬ್ರೇಕಿಂಗ್ ಡಾನ್" ಎಂಬ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಮಿಲಿಟರಿ ಮುಖ್ಯಸ್ಥ ತೈಸೀರ್ ಅಲ್-ಜಬಾರಿ ಮತ್ತು ಇತರ ಪಿಐಜೆ ಸದಸ್ಯರನ್ನೂ ಹತ್ಯೆ ಮಾಡಲಾಗಿದೆ. ಗಾಜಾ ಪಟ್ಟಿಯ ಅಂಚಿನಲ್ಲಿರುವ ಇಸ್ರೇಲಿ ಗಡಿ ಪಟ್ಟಣಗಳು ಭಾನುವಾರ ಬೆಳಗ್ಗೆಯಿಂದ ಮತ್ತೆ ರಾಕೆಟ್ ಅಲರ್ಟ್‌ನಲ್ಲಿವೆ.