ಟೆಲ್ ಅವೀವ್: ಗಾಝಾಕ್ಕೆ ತ್ವರಿತವಾಗಿ ಮಾನವೀಯ ಸಾಮಗ್ರಿಗಳನ್ನು ಪೂರೈಸಲು ಅನುಕೂಲ ಮಾಡಿಕೊಡಲು ಕೆರೆಮ್ ಶಲೋಮ್ ಗಡಿಯನ್ನು ಮುಕ್ತಗೊಳಿಸಲು ಇಸ್ರೇಲ್ ಸರಕಾರ ಒಪ್ಪಿಕೊಂಡಿದೆ. ಮುಂದಿನ ಕೆಲವು ದಿನಗಳಲ್ಲಿ ಕೆರೆಮ್ ಶಲೋಮ್ ಗಡಿಯನ್ನು ತೆರೆಯಲಾಗುವುದು ಎಂದು ಪ್ಯಾಲೆಸ್ಟೀನಿಯರೊಂದಿಗಿನ ನಾಗರಿಕ ಸಮನ್ವಯಕ್ಕಾಗಿ ಸ್ಥಾಪಿಸಲಾಗಿರುವ ಇಸ್ರೇಲ್ ಸಂಸ್ಥೆ ಕೋಗಟ್ (COGAT) ಹೇಳಿಕೆಯಲ್ಲಿ ತಿಳಿಸಿದೆ.
ಕೆರೆಮ್ ಶಲೋಮ್ ಮೂಲಕ ಸಾಗುವ ಸಾಮಗ್ರಿಗಳನ್ನು ತಪಾಸಣೆಯ ನಂತರ ಗಾಝಾದೊಳಗೆ ಬಿಡಲಾಗುವುದು ಎಂದು ಕೋಗಟ್ ಸಿವಿಲ್ ವಿಭಾಗದ ಮುಖ್ಯಸ್ಥ ಕರ್ನಲ್ ಎಲಾಡ್ ಗೊರೆನ್ ಹೇಳಿದ್ದಾರೆ. ಅಕ್ಟೋಬರ್ 7ರಂದು ಯುದ್ಧ ಭುಗಿಲೇಳುವ ಮೊದಲು ಗಾಝಾಗೆ ಹೋಗುವ ಶೇಕಡಾ 60 ಕ್ಕಿಂತ ಹೆಚ್ಚು ಟ್ರಕ್ ಲೋಡ್‌ಗಳನ್ನು ಸಾಗಿಸಲು ಕೆರೆಮ್ ಶಾಲೋಮ್ ಕ್ರಾಸಿಂಗ್ ಅನ್ನೇ ಬಳಸಲಾಗುತ್ತಿತ್ತು.
ಗಾಝಾಕ್ಕೆ ಪರಿಹಾರ ಸಾಮಗ್ರಿ ಸಾಗಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಮತ್ತು ಸಕಾರಾತ್ಮಕ ಬೆಳವಣಿಗೆ ಆಗಲಿವೆ ಎಂದು ವಿಶ್ವಸಂಸ್ಥೆಯ ಪರಿಹಾರ ಕಾರ್ಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಮಾಧ್ಯಮಗಳಿಗೆ ತಿಳಿಸಿದರು. ಜಿನೀವಾದಿಂದ ನೀಡಿದ ಹೇಳಿಕೆಯಲ್ಲಿ ಗ್ರಿಫಿತ್ಸ್, "ಇದು ನಾವು ಅನೇಕ ದಿನಗಳ ನಂತರ ನೋಡುತ್ತಿರುವ ಉತ್ತಮ ಬೆಳವಣಿಗೆಯಾಗಿದೆ ಮತ್ತು ಮಾನವೀಯ ಕಾರ್ಯಾಚರಣೆಗಳಿಗೆ ದೊಡ್ಡ ಉತ್ತೇಜನ ನೀಡುತ್ತದೆ" ಎಂದು ಹೇಳಿದರು.