ವಾಷಿಂಗ್ಟನ್ (ಅಮೆರಿಕ ) : ಪೂರ್ವ ಸಿರಿಯಾದಲ್ಲಿ ಡ್ರೋನ್ ದಾಳಿ ಮಾಡುವ ಮೂಲಕ ಐಸಿಸ್ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಸೇನೆ ಹೇಳಿಕೊಂಡಿದೆ. ಅಮೆರಿಕ ಸೆಂಟ್ರಲ್ ಕಮಾಂಡ್ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಒಸಾಮಾ ಅಲ್-ಮುಹಾಜರ್ ಹತ್ಯೆಯಾಗಿದ್ದಾನೆ.
ಈ ಕುರಿತು ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ಮುಖ್ಯಸ್ಥ ಮೈಕೆಲ್ ಕುರಿಲ್ಲಾ ಮಾಹಿತಿ ನೀಡಿ, "ನಾವು ಐಸಿಸ್ ಉಗ್ರ ಸಂಘಟನೆಯನ್ನು ಸೋಲಿಸಲು ಬದ್ಧರಾಗಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಯಾವುದೇ ನಾಗರಿಕರು ಸಾವನ್ನಪ್ಪಿಲ್ಲ" ಎಂದು ತಿಳಿಸಿದ್ದಾರೆ.
"ನಮ್ಮ ಮಿಲಿಟರಿ ಕಾರ್ಯಾಚರಣೆಗೆ ಬಳಸಿದ ಡ್ರೋನ್‌ಗಳಿಗೆ ರಷ್ಯಾದ ಯುದ್ಧ ವಿಮಾನಗಳು ಅಡ್ಡಿಪಡಿಸುತ್ತಿದ್ದವು. ಉಗ್ರರ ಮೇಲೆ MQ-9s ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ. ಸುಮಾರು ಎರಡು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ರಷ್ಯಾದ ವಿಮಾನಗಳು ತೊಂದರೆ ನೀಡಿದವು. ಇದೇ ರೀತಿ ಗುರುವಾರವೂ ಕೂಡ ಎರಡನೇ ಬಾರಿಗೆ ಸಿರಿಯಾದಲ್ಲಿ ಐಸಿಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಅಮೆರಿಕ ಡ್ರೋನ್‌ಗಳಿಗೆ ರಷ್ಯಾದ ಮಿಲಿಟರಿ ವಿಮಾನವು ಅಡ್ಡಿಪಡಿಸಿದೆ" ಎಂದು ಅಮೆರಿಕ ಕಮಾಂಡರ್ ಆರೋಪಿಸಿದರು.