ದುಬೈ:ಇರಾನ್ನಲ್ಲಿ ಇಸ್ಲಾಮಿಕ್ ಸ್ಕಾರ್ಫ್ (ಹಿಜಾಬ್) ಧರಿಸುವ ವಿಚಾರವಾಗಿ 22 ವರ್ಷದ ಯುವತಿ ಮಹ್ಸಾ ಅಮಿನಿ ಮೃತಪಟ್ಟು ಒಂದು ವರ್ಷ ಕಳೆದಿದೆ. ಇಡೀ ದೇಶದ ತುಂಬಾ ಹಿಜಾಬ್ ಕಿಚ್ಚು ಹಬ್ಬಿದೆ. ಇದರ ನಡುವೆ ಸಾರ್ವಜನಿಕವಾಗಿ ಹಿಜಾಬ್ ಧರಿಸಲು ನಿರಾಕರಿಸುವ ಮಹಿಳೆಯರು ಮತ್ತು ಅವರನ್ನು ಬೆಂಬಲಿಸುವವರಿಗೆ ಭಾರಿ ಶಿಕ್ಷೆ ವಿಧಿಸುವ ಹೊಸ ಮಸೂದೆಯನ್ನು ಇರಾನ್ ಸಂಸತ್ತು ಅಂಗೀಕರಿಸಿದೆ.
ಇರಾನ್ನಲ್ಲಿ ಹಿಜಾಬ್ ಎಂದು ಕರೆಯಲ್ಪಡುವ ಸ್ಕಾರ್ಫ್ ಧರಿಸುವುದು ಕಡ್ಡಾಯವಾಗಿದೆ. ಹಿಜಾಬ್ ಧರಿಸದೆ ಮಹಿಳೆಯರು ಕಾರ್ಯ ನಿರ್ವಹಿಸುವ ವ್ಯಾಪಾರ ಸ್ಥಳಗಳ ಮಾಲೀಕರಿಗೂ ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ ಹಿಜಾಬ್ ವಿರುದ್ಧ ಸಂಘಟನೆ ಮಾಡುವ ಕಾರ್ಯಕರ್ತರಿಗೂ ಶಿಕ್ಷೆಯನ್ನು ಈ ಮಸೂದೆ ವಿಸ್ತರಿಸುತ್ತದೆ. ಸಂಘಟಿತ ರೀತಿಯಲ್ಲಿ ಅಪರಾಧ ಸಂಭವಿಸಿದಲ್ಲಿ, ಈ ಕಾನೂನು ಉಲ್ಲಂಘಿಸುವವರು 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಇದನ್ನೂ ಓದಿ:ಇರಾನ್ ಮಹಿಳೆಯ ಹಕ್ಕು ಬೆಂಬಲಿಸಿದ್ದ ಫುಟ್ಬಾಲ್ ಆಟಗಾರನಿಗೂ ಗಲ್ಲು ಶಿಕ್ಷೆ?
ಇರಾನ್‌ನ 290 ಸದಸ್ಯ ಬಲದ ಸಂಸತ್ತಿನಲ್ಲಿ 152 ಸಂಸದರ ಬೆಂಬಲದೊಂದಿಗೆ ಈ ಮಸೂದೆಗೆ ಅನುಮೋದನೆ ಸಿಕ್ಕಿದೆ. ಈ ವಿಧೇಯಕವು ಸಾಂವಿಧಾನಿಕ ಕಾವಲುಗಾರನಾಗಿ ಕಾರ್ಯನಿರ್ವಹಿಸುವ ಧಾರ್ಮಿಕ ಮುಖಂಡರನ್ನು ಒಳಗೊಂಡ ಗಾರ್ಡಿಯನ್ ಕೌನ್ಸಿಲ್‌ನಿಂದ ಅನುಮೋದನೆ ಪಡೆಯಬೇಕಿದೆ. ಮುಂದಿನ ಮೂರು ವರ್ಷ ಈ ಕಾನೂನು ಜಾರಿಯಲ್ಲಿರುತ್ತದೆ. ಇರಾನ್‌ನ ಆಡಳಿತಗಾರರು ಹಿಜಾಬ್ ಕಾನೂನನ್ನು ಇಸ್ಲಾಮಿಕ್ ಗಣರಾಜ್ಯದ ಪ್ರಮುಖ ಸ್ತಂಭವೆಂದು ಪರಿಗಣಿಸುತ್ತಾರೆ.