ಟೆಹ್ರಾನ್: ಹಿಜಾಬ್ನನ್ನು ಸರಿಯಾಗಿ ಧರಿಸದ ಕಾರಣಕ್ಕೆ ನೈತಿಕ ಪೊಲೀಸರಿಂದ ಯುವತಿ ಬಂಧನಕ್ಕೊಳಗಾಗಿ, ಮೃತಪಟ್ಟಿರುವ ಘಟನೆ ಇರಾನ್‌ನಲ್ಲಿ ಇತ್ತೀಚೆಗೆ ನಡೆದಿತ್ತು. ಇದನ್ನು ಖಂಡಿಸಿ ಮಹಿಳೆಯರು ಬೀದಿಗಿಳಿದಿದ್ದು, ತಮ್ಮ ಕೂದಲನ್ನು ಕತ್ತರಿಸಿ, ಹಿಜಾಬ್ನ್ನು ತೆಗೆಯುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.
ಮೃತಪಟ್ಟಿರುವ ಯುವತಿಯ ಹುಟ್ಟೂರಾದ ಸಘೆಜ್ ಹಾಗೂ ಸುತ್ತಲಿನ ಪ್ರಾಂತ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸಾವಿರಾರು ಮಹಿಳೆಯರು ರಸ್ತೆಗಿಳಿದು ತಮ್ಮ ಹಿಜಾಬ್ಗಳನ್ನು ಗಾಳಿಯಲ್ಲಿ ತೂರುವ ಮೂಲಕ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಇರಾನ್‌ನಲ್ಲಿ ಭಾರೀ ಪ್ರತಿಭಟನೆ ಇರಾನಿನ ಪತ್ರಕರ್ತೆ ಮತ್ತು ಕಾರ್ಯಕರ್ತೆ ಮಸಿಹ್ ಅಲಿನೆಜಾದ್, ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮತ್ತು ಹಿಜಾಬ್ನನ್ನು ಸುಡುವ ಮೂಲಕ ಮಹ್ಸಾ ಅಮಿನಿ ಹತ್ಯೆಯನ್ನು ಖಂಡಿಸಿದರು ಎಂದು ಅವರು ಬರೆದುಕೊಂಡಿದ್ದಾರೆ.
ಭಾನುವಾರ ಭದ್ರತಾ ಪಡೆ ಸಘೇಜ್ ನಗರದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಆದರೆ ಈಗ ಟೆಹ್ರಾನ್ ಕೂಡ ಪ್ರತಿಭಟನೆಗೆ ಸೇರಿಕೊಂಡಿದೆ ಎಂದು ಅಲಿನೆಜಾದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇರಾನ್‌ನಲ್ಲಿ ಭಾರೀ ಪ್ರತಿಭಟನೆ ಪೊಲೀಸರು ಅಮಿನಿಯನ್ನು ಬಲವಂತವಾಗಿ ಪೊಲೀಸ್ ವಾಹನದೊಳಗೆ ಕೂರಿಸಿದ್ದರು. ಆಕೆಯ ಸಹೋದರ ಬಿಡುವಂತೆ ಕೇಳಿಕೊಂಡರೂ ಕ್ಯಾರೇ ಎನ್ನಲಿಲ್ಲ. ಒಂದು ಗಂಟೆ ಠಾಣೆಯಲ್ಲಿ ಆಕೆಯನ್ನು ಇಟ್ಟಿದ್ದರು. ಬಳಿಕ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು. ನಂತರ ಆಕೆಗೆ ಹೃದಯಾಘಾತವಾಗಿದೆ ಎಂದು ಪೊಲೀಸರು ಹೇಳಿದರೆಂದು ಕುಟುಂಬಸ್ಥರು ಮಾನವ ಹಕ್ಕುಗಳ ಕಾರ್ಯಕರ್ತರ ಬಳಿ ವಿವರಿಸಿದ್ದರು.
ಇದನ್ನೂ ಓದಿ: ಹಿಜಾಬ್ ಧರಿಸದ್ದಕ್ಕೆ ನೈತಿಕ ಪೊಲೀಸ್ಗಿರಿ.. ಚಿತ್ರಹಿಂಸೆಗೆ ನರಳಿ ಕೋಮಾದಲ್ಲೇ ಪ್ರಾಣಬಿಟ್ಟ ಯುವತಿ!
ಇರಾನ್ ಪೊಲೀಸರು, ಅಮಿನಿ ಮೇಲೆ ಹಲ್ಲೆ ಮಾಡಿದ್ದನ್ನು ತಳ್ಳಿಹಾಕಿದ್ದಾರೆ. ಬಂಧನಕ್ಕೀಡಾಗುವಾಗಲೇ ಆಕೆಗೆ ಅನಾರೋಗ್ಯವಿತ್ತು. ಬಂಧನಕ್ಕೀಡಾದಾಗ ಆಕೆಯ ಅನಾರೋಗ್ಯ ಮತ್ತಷ್ಟು ಹೆಚ್ಚಾಯಿತು. ಹಾಗಾಗಿ, ಆಕೆಯನ್ನು ಟೆಹರಾನ್ನ ಕಾಸ್ರಾ ಆಸ್ಪತ್ರಗೆ ದಾಖಲಿಸಲಾಯಿತು. ಬಂಧನದಿಂದಾದ ಮಾನಸಿಕ ಒತ್ತಡದಿಂದಾಗಿ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹ್ಸಾ ಅಮಿನಿ (22ವರ್ಷ) ಕಳೆದ ವಾರ ಇರಾನ್ನ ಕುರ್ದಿಸ್ತಾನ್ ಪ್ರಾಂತ್ಯದಿಂದ ತನ್ನ ಸಂಬಂಧಿಕರನ್ನು ಭೇಟಿಯಾಗಲು ರಾಜಧಾನಿ ಟೆಹ್ರಾನ್ಗೆ ತೆರಳಿದ್ದಳು. ಈ ಸಂದರ್ಭದಲ್ಲಿ ಮಹ್ಸಾ ಹಿಜಾಬ್ನನ್ನು ಸರಿಯಾಗಿ ಧರಿಸಿಲ್ಲ ಎಂದು ಆರೋಪಿಸಿ ಇರಾನ್ ನೈತಿಕ ಪೊಲೀಸರು ಬಂಧಿಸಿದ್ದರು. ಬಂಧನದ ನಂತರ ಕೋಮಾ ಸ್ಥಿತಿ ತಲುಪಿದ್ದು, ಬಳಿಕ ಆಕೆ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದರು.