ದುಬೈ:ಇರಾನ್ನ ಟೆಹ್ರಾನ್ ಮೆಟ್ರೋದಲ್ಲಿ ತಿಂಗಳ ಹಿಂದೆ ನಿಗೂಢವಾಗಿ ನಡೆದ ಘಟನೆಯಲ್ಲಿ ಗಾಯಗೊಂಡು ಕೋಮಾಗೆ ಜಾರಿದ್ದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಮೃತರನ್ನು ಅರ್ಮಿತಾ ಗೆರಾವಂಡ್ ಎಂದು ಗುರುತಿಸಲಾಗಿದೆ.
ಇರಾನ್‌ನಲ್ಲಿ ಹಿಜಾಬ್ ಅಥವಾ ಹೆಡ್ ಸ್ಕಾರ್ಫ್ ಧರಿಸುವುದು ಕಡ್ಡಾಯವಾಗಿದೆ. ಅಕ್ಟೋಬರ್ 1ರಂದು ಅರ್ಮಿತಾ ಗೆರಾವಂಡ್ ಸ್ಕಾರ್ಫ್ ಧರಿಸದೇ ದಕ್ಷಿಣ ಟೆಹ್ರಾನ್‌ನ ಮೆಯ್ಡಾನ್-ಇ ಶೋಹಾಡಾ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಳು. ಈ ವೇಳೆ, ಈಕೆ ಗಾಯಗೊಂಡು ಕೋಮಾ ಜಾರಿದ್ದಳು. ಆದರೆ, ರೈಲು ಪ್ರವೇಶಿಸಿದ ಕೆಲವೇ ಸೆಕೆಂಡ್ಗಳಲ್ಲಿ ಏನಾಯಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈ ಯುವತಿ ಸಾವನ್ನಪ್ಪಿದ್ದಾಳೆ ಎಂದು ಇರಾನ್ನ ಸರ್ಕಾರಿ ಸ್ವಾಮ್ಯದ ಇರ್ನಾ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.
ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಅರ್ಮಿತಾ ತಲೆ ಬಡಿದಿತ್ತು ಎಂದು ಸ್ನೇಹಿತರೊಬ್ಬರು ಸುದ್ದಿ ಸಂಸ್ಥೆಗೆ ಹೇಳಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ, ಸರ್ಕಾರಿ ಮಾಧ್ಯಮದ ಮುಂದೆ ತಾಯಿ ಮತ್ತು ತಂದೆ ಬಂದು ರಕ್ತದೊತ್ತಡ ಸಮಸ್ಯೆ ಹಾಗೂ ಅವಳು ಬಿದ್ದಿರುವುದು ಬಹುಶಃ ಈ ಘಟನೆಗೆ ಕಾರಣರಾಗಿರಬಹುದು ಎಂದು ಹೇಳಿದ್ದಾರೆ.
ಹಿಜಾಬ್ ವಿಚಾರವಾಗಿ 2022ರ ಸೆಪ್ಟೆಂಬರ್ 16ರಂದು ನೈತಿಕ ಪೊಲೀಸ್ಗಿರಿಯಿಂದ ಬಂಧನಕ್ಕೆ ಒಳಗಾಗಿದ್ದ ಮಹ್ಸಾ ಅಮಿನಿ ಎಂಬ ಯುವತಿ ಕಸ್ಟಡಿಯಲ್ಲೇ ಇರುವಾಗಲೇ ಸಾವಿಗೀಡಾಗಿದ್ದರು. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿ ದೊಡ್ಡ ಮಟ್ಟದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಇದೀಗ ಸ್ಕಾರ್ಫ್ ಧರಿಸದ ಸಮಯದಲ್ಲಿ ಅರ್ಮಿತಾ ಗೆರಾವಂಡ್ ನಿಗೂಢವಾಗಿ ಗಾಯಗೊಂಡು ಮೃತಪಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಹಿಜಾಬ್ ಧರಿಸದ ಕಾರಣಕ್ಕೆ ಅರ್ಮಿತಾ ಗೆರಾವಂಡ್ ಅವರನ್ನು ತಳ್ಳಿ ಅಥವಾ ಹಲ್ಲೆ ನಡೆಸಿರಬಹುದು ಎಂದು ವಿದೇಶದಲ್ಲಿರುವ ಹಿಜಾಬ್ ವಿರೋಧಿ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೇ, ಸಂತ್ರಸ್ತರ ಕುಟುಂಬಗಳ ಮೇಲೆ ಸರ್ಕಾರದ ಒತ್ತಡ ಹಾಕಿ ಅವರಿಂದ ಬಲವಂತದ ಹೇಳಿಕೆ ಪಡೆದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಪ್ರಸಾರ ಮಾಡುತ್ತಿದೆ. ಹೀಗಾಗಿ ಇರಾನ್‌ನಲ್ಲಿ ವಿಶ್ವಸಂಸ್ಥೆಯ ಸತ್ಯಶೋಧನಾ ಮಿಷನ್ನಿಂದ ಸ್ವತಂತ್ರ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಕಳೆದ ತಿಂಗಳಷ್ಟೇ ಇರಾನ್ ಸಂಸತ್ತು ಕಠಿಣವಾದ ಹಿಜಾಬ್ ಕಾನೂನನ್ನು ಅಂಗೀಕರಿಸಿದೆ. ಸಾರ್ವಜನಿಕವಾಗಿ ಹಿಜಾಬ್ ಧರಿಸಲು ನಿರಾಕರಿಸುವ ಮಹಿಳೆಯರು ಮತ್ತು ಅವರನ್ನು ಬೆಂಬಲಿಸುವವರಿಗೆ ಭಾರಿ ಶಿಕ್ಷೆ ವಿಧಿಸಲು ನಿರ್ಧರಿಸಿದೆ. ಹಿಜಾಬ್ ಧರಿಸದೆ ಮಹಿಳೆಯರು ಕಾರ್ಯ ನಿರ್ವಹಿಸುವ ವ್ಯಾಪಾರ ಸ್ಥಳಗಳ ಮಾಲೀಕರು ಹಾಗೂ ಹಿಜಾಬ್ ವಿರುದ್ಧ ಸಂಘಟನೆ ಮಾಡುವ ಕಾರ್ಯಕರ್ತರಿಗೂ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಸಂಘಟಿತ ರೀತಿಯಲ್ಲಿ ಈ ಕಾನೂನು ಉಲ್ಲಂಘಿಸುವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:ಕಠಿಣ ಹಿಜಾಬ್ ಮಸೂದೆಗೆ ಇರಾನ್ ಸಂಸತ್ತು ಅಂಗೀಕಾರ: ಸಾರ್ವಜನಿಕವಾಗಿ ಸ್ಕಾರ್ಫ್ ಧರಿಸದಿದ್ದರೆ 10 ವರ್ಷದವರೆಗೆ ಜೈಲು ಶಿಕ್ಷೆ