ಇರಾನ್ನಲ್ಲಿ ಹಿಜಾಬ್ ವಿರೋಧಿ ಆಂದೋಲನ ತೀವ್ರ ಸ್ವರೂಪ ಪಡೆಯತ್ತಿದೆ. ಮುಖ್ಯವಾಗಿ ಸರಿಯಾಗಿ ಸ್ಕಾರ್ಫ್ ಧರಿಸಿಲ್ಲ ಎಂದು ಆರೋಪಿಸಿ 22 ವರ್ಷದ ಯುವತಿ ಮಹ್ಸಾ ಅಮಿನಿ 'ನೈತಿಕತೆ ಪೊಲೀಸ್ಗಿರಿ'ಯಿಂದ ಬಂಧಿಸಲ್ಪಟ್ಟು ಸಾವಿಗೀಡಾದ ನಂತರ ಇರಾನ್ನಲ್ಲಿ ಭುಗಿಲೆದ್ದ ಪ್ರತಿಭಟನೆಗಳು ಕಡಿಮೆಯಾಗುವ ಲಕ್ಷಣಗಳನ್ನು ತೋರುತ್ತಿಲ್ಲ. ಈ ಪ್ರತಿಭಟನೆಯ ಕಾವು ಇರಾನ್ನ 80 ಇತರ ನಗರಗಳಿಗೂ ಹರಡಿದೆ.
ಕುರ್ದಿಸ್ತಾನ್ ಪ್ರಾಂತ್ಯದ ಸಾಕ್ವೆಜ್ ನಗರದಲ್ಲಿ ಬಹುಪಾಲು ಕುರ್ದಿಗಳು ವಾಸಿಸುತ್ತಾರೆ. ಸುನ್ನಿ ಇಸ್ಲಾಂವನ್ನು ಅನುಸರಿಸುತ್ತಾರೆ. ಅಲ್ಲಿಯೇ ಮಹ್ಸಾ ಅಮಿನಿಯನ್ನು ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಮಿನಿ ಸಾವಿನ 40ನೇ ದಿನದ ನಿಮಿತ್ತ ಸಾವಿರಾರು ಜನರು ತಮ್ಮ ಸಾಂಪ್ರದಾಯಿಕ ಗೌರವ ಸಲ್ಲಿಸಲು ಸೇರಿದ್ದರು. ಆದರೆ, ಆಗ ಕೂಡ ಹಿಂಸಾತ್ಮಕ ಘಟನೆ ಸಂಭವಿಸಿದೆ. ಹೀಗಾಗಿ ಅಮಿನಿಗೆ ನಮಿಸಲು ಸೇರಿದ್ದ ಹಲವರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಈ ಘಟನೆಗೆ ಭಯೋತ್ಪಾದಕ ಸಂಘಟನೆಯಾದ ಐಎಸ್ಐಎಸ್ ಕಾರಣ. ಯಾಕೆಂದರೆ ಸಿರಿಯಾದಲ್ಲಿ ಐಎಸ್ಐಎಸ್ ವಿರುದ್ಧವೇ ಕುರ್ದಿಗಳು ಹೋರಾಡುತ್ತಿದ್ದಾರೆ.
ಮಹಿಳೆಯರಿಗೆ ವಿಧಿಸಲಾದ ನಿಯಮಗಳ ಬಗ್ಗೆ ಅಸಮಾಧಾನ: ಸಾಕ್ವೆಜ್ನಲ್ಲಿ ಪ್ರತಿಭಟನಾನಿರತ ಯುವ ಜನತೆ ತಮ್ಮ ತಲೆಯ ಸ್ಕಾರ್ಫ್ಗಳನ್ನು ಹರಿದು ಸಾರ್ವಜನಿಕವಾಗಿ ಬೆಂಕಿ ಹಚ್ಚಿದ್ದಾರೆ. ದೇಶದ ನಿಯಮಗಳನ್ನು ಬಹಿರಂಗವಾಗಿ ಧಿಕ್ಕರಿಸಿದ ಮೊದಲ ಇರಾನ್ನ ನಗರ ಸಾಕ್ವೆಜ್ ಆಗಿದೆ. ಇಲ್ಲಿ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಬೆಳೆದ ನಂತರ, ಅದು ನಿಯಂತ್ರಣವನ್ನೇ ಕಳೆದುಕೊಂಡಿದೆ. ಈ ದಂಗೆಯನ್ನು ನಿಯಂತ್ರಿಸಲು ಇರಾನ್ನ ಕೇಂದ್ರ ಸರ್ಕಾರವು ಸಾಕಷ್ಟು ಯತ್ನಿಸುತ್ತಿದೆ. ಇದರಲ್ಲಿ ನಡೆದ ಸಾವುಗಳೇ ಹೆಚ್ಚಿನ ಪ್ರತಿಭಟನೆಗೂ ಕಾರಣವಾಗುತ್ತಿದೆ.
ಪ್ರತ್ಯೇಕತಾವಾದದ ಇತಿಹಾಸ ಹೊಂದಿರುವ ಕುರ್ದಿಸ್ತಾನದ ಹೊರತಾಗಿ, ಇಫ್ಶಾಹಾನ್ ಮತ್ತು ಜಹೇದಾನ್ನಂತಹ ನಗರಗಳು ದೇಶದಾದ್ಯಂತ ಮಹಿಳೆಯರಿಗೆ ವಿಧಿಸಲಾದ ನಿಯಮಗಳ ಬಗ್ಗೆ ರಹಸ್ಯವಾಗಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿವೆ. ಇಫ್ಶಾಹಾನ್ ಸುಮಾರು 20,000 ಪರ್ಷಿಯನ್ ಯಹೂದಿಗಳಿಗೆ ನೆಲೆಯಾಗಿದೆ. ಇಶ್ಫಹಾನ್ನಲ್ಲಿರುವ ಮಹಿಳೆಯರು ಇರಾನ್ನ ಇತರ ಭಾಗಗಳ ಮಹಿಳೆಯರೊಂದಿಗೆ ಒಗ್ಗಟ್ಟಿನಿಂದ ಬೀದಿಗಿಳಿಯುತ್ತಿದ್ದಾರೆ. ಮಹ್ಸಾ ಅಮಿನಿಯ ಹತ್ಯೆ ಮತ್ತು ನೂರಾರು ಜನರ ಹತ್ಯೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸುತ್ತಿದ್ದಾರೆ.
ಇಸ್ಫಹಾನ್ನಲ್ಲಿ ಪ್ರಕ್ಷುಬ್ಧತೆ:ಇಫ್ಶಾಹಾನ್ ಹೆಚ್ಚಾಗಿ ಶಾಂತ ನಗರವಾಗಿದೆ. ಜೊತೆಗೆ ಇದು ವ್ಯಾಪಾರ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದೆ. 13 ಸಿನಗಾಗ್ಗಳನ್ನು ಹೊಂದಿರುವ ನಗರವು ಯಾವುದೇ ಅಶಾಂತಿ ಅಥವಾ ವಿವಾದದ ಭಾಗವಾಗಿರಲಿಲ್ಲ. ಇರಾನ್ನಲ್ಲಿನ ಅಶಾಂತಿ ಮತ್ತು ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪಶ್ಚಿಮ ಮತ್ತು ಝಿಯೋನಿಸ್ಟ್ಗಳನ್ನು ದೂರಿರುವ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಇತ್ತೀಚೆಗೆ ನೀಡಿದ ಹೇಳಿಕೆಗಳು ಇಸ್ಫಹಾನ್ನಲ್ಲಿ ಪ್ರಕ್ಷುಬ್ಧತೆಗೆ ಮತ್ತಷ್ಟು ಕಾರಣವಾಗಿದೆ.