ಕರ್ನಾಟಕ

karnataka

ETV Bharat / international

ಹಿಜಾಬ್​ ಧರಿಸದ ಮಹಿಳೆಯರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಇರಾನ್ - ಇರಾನ್​

ಹಿಜಾಬ್ ಇಲ್ಲದೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮಹಿಳೆಯರ ವಿರುದ್ಧ ಕರುಣೆ ಇಲ್ಲದೇ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಇರಾನ್​ ನ್ಯಾಯಾಂಗ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.

Etv Bharat
Etv Bharat

By

Published : Apr 2, 2023, 1:08 PM IST

ನವದೆಹಲಿ: ಇರಾನ್​​ನಲ್ಲಿ ಮಹ್ಸಾ ಅಮಿನಿ ಎಂಬ ಯುವತಿಯ ಸಾವಿನ ಬಳಿಕ ಆರಂಭವಾದ ಪ್ರತಿಭಟನೆ ಮತ್ತಷ್ಟು ಉಲ್ಬಣಗೊಂಡಿದೆ. "ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮಹಿಳೆಯರ ಮೇಲೆ ಕರುಣೆ ಇಲ್ಲದೇ ಖಡಕ್ ಕಾನೂನು ಕ್ರಮ ಜರುಗಿಸುವುದಾಗಿ ಇರಾನ್​ ನ್ಯಾಯಾಂಗದ ಮುಖ್ಯಸ್ಥ ಘೋಲಾಮ್‌ಹೊಸೇನ್ ಮೊಹ್ಸೇನಿ-ಎಜೆಯಿ ಎಚ್ಚರಿಕೆ ನೀಡಿದ್ದಾರೆ" ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮಹಿಳೆಯರು ಕಡ್ಡಾಯ ಹಿಜಾಬ್ ಧರಿಸುವ ಕಾನೂನು ಜಾರಿಗೊಳಿಸುವ ಸಂಬಂಧ ಇರಾನ್‌ನ ಅಧಿಕಾರಿಗಳು ತಮ್ಮ ನಿರ್ಣಯವನ್ನು ಸ್ಪಷ್ಟಪಡಿಸುತ್ತಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಮಹಿಳೆಯರು ಹಿಜಾಬ್ ನಿಯಮಗಳನ್ನು ಉಲ್ಲಂಘಿಸುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಇರಾನ್ ಸಂಸದರು ನ್ಯಾಯಾಂಗಕ್ಕೆ ಒತ್ತಾಯಿಸಿದ್ದಾರೆ.

ಹಿಜಾಬ್ ಇಸ್ಲಾಮಿಕ್ ಕಾನೂನಿನ ಅತ್ಯಗತ್ಯ ಅಂಶವಾಗಿ ಉಳಿದಿದೆ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಪ್ರಮುಖ ತತ್ವಗಳಲ್ಲಿ ಒಂದಾಗಿ ಉಳಿಯುತ್ತದೆ ಎಂದು ಆಂತರಿಕ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಂಸದರೊಬ್ಬರು ಹಿಜಾಬ್​​ ಅನ್ನು "ದೈವಿಕ ತೀರ್ಪು" ಎಂದು ಕರೆದದ್ದನ್ನು ಜಾರಿಗೊಳಿಸಲು ಶಾಸಕಾಂಗ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಂದಿನ 48 ಗಂಟೆಗಳಲ್ಲಿ ನ್ಯಾಯಾಂಗವು ಅಂತಹ ಕ್ರಮ ಕೈಗೊಳ್ಳದಿದ್ದರೆ ಸಂಸದರು ಮಸೂದೆಯನ್ನು ಮಂಡಿಸುತ್ತಾರೆ ಎಂದು ಇರಾನಿನ ಸಂಪ್ರದಾಯವಾದಿ ರಾಜಕಾರಣಿ ಹುಸೇನ್​ ಅಲಿ ಹಾಜಿ ದೇಲಿಗಾನಿ ಹೇಳಿದರು. ಇದು "ಪರಿಶುದ್ಧತೆ ಮತ್ತು ಹಿಜಾಬ್" ಕುರಿತು ಸಂಸದೀಯ ಸಾಂಸ್ಕೃತಿಕ ಆಯೋಗದ ವರದಿಗೆ ಅನುಗುಣವಾಗಿರುತ್ತದೆ ಎಂದು ಅವರು ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿ​ನಲ್ಲಿ ಪೊಲೀಸ್​ ಕಸ್ಟಡಿಯಲ್ಲಿ ವಿದ್ಯಾರ್ಥಿನಿ ಮಹ್ಸಾ ಅಮಿನಿ ಸಾವಿನ ಬಳಿಕ ಇರಾನ್​ನಲ್ಲಿ ಆರಂಭವಾದ ವಸ್ತ್ರ ಸಂಹಿತೆ​ ವಿರುದ್ಧದ ಹೋರಾಟ ಮುಂದುವರೆದಿದೆ. ಹಿಜಾಬ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅಮಿನಿಯನ್ನು ಬಂಧಿಸಲಾಗಿತ್ತು. ಇರಾನ್ ಮಾನವ ಹಕ್ಕುಗಳ ಆಯೋಗದ ವರದಿಯಂತೆ "2023ರ ಜನವರಿ 27ರ ವರೆಗೆ 64 ಮಕ್ಕಳು, ಮಹಿಳೆಯರು ಸೇರಿದಂತೆ 488 ಜನರು ಪ್ರತಿಭಟನೆಯಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ ಹಲವರು ಪೊಲೀಸರ ಲಾಠಿ ಚಾರ್ಜ್ ಹಾಗೂ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ:ಇರಾನ್‌ನ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕುರ್ದಿಶ್ ಜನಾಂಗೀಯ ಗುಂಪಿನ ಮಹ್ಸಾ ಅಮಿನಿ(22) ಎಂಬ ವಿದ್ಯಾರ್ಥಿನಿಯನ್ನು 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಟೆಹರಾನ್ ಪೊಲೀಸರು ಬಂಧಿಸಿದ್ದರು. ಆದರೆ ಬಂಧಿಸಿದ 3 ದಿನಗಳ ಬಳಿಕ ಆಕೆ ಪೊಲೀಸ್​ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಳು. ಇದು ಅನೇಕ ವರ್ಷಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ವಸ್ತ್ರ ಸಂಹಿತೆ ವಿರುದ್ಧ ಮಹಿಳೆಯರ ಆಕ್ರೋಶಕ್ಕೆ ಕಾರಣವಾಯಿತು.

ಇದನ್ನೂ ಓದಿ:ಹಿಜಾಬ್ ವಿರೋಧಿಸಿದ ಯುವತಿ ಹದಿಸ್ ನಜಾಫಿಗೆ ಗುಂಡಿಕ್ಕಿ ಕೊಲೆ

ಪೊಲೀಸರ ಲಾಠಿ, ಗುಂಡೇಟುಗಳಿಗೆ ಜಗ್ಗದೆ ಸತತ 7 ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಸ್ವಲ್ಪ ಬೆದರಿದ ಇರಾನ್​ ಸರ್ಕಾರ ಪ್ರತಿಭಟನೆ ಭುಗಿಲೆದ್ದ 3 ತಿಂಗಳ ಬಳಿಕ ನೈತಿಕ ಪೊಲೀಸ್ ವಿಭಾಗವನ್ನು ರದ್ದುಗೊಳಿಸಿತ್ತು. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸ್ಥಾಪನೆ ನಂತರ ದೇಶದಲ್ಲಿ ಹಿಜಾಬ್​ನ್ನು ಕಡ್ಡಾಯಗೊಳಿಸಲಾಗಿತ್ತು.

ಅಧ್ಯಕ್ಷ ಹಸನ್ ರೌಹಾನಿ ಅವರ ಅಧಿಕಾರಾವಧಿಯಲ್ಲಿ ಮಹಿಳೆಯರು ಸಡಿಲ ಮತ್ತು ಬಣ್ಣ ಬಣ್ಣದ ಶಿರವಸ್ತ್ರ ಹಾಗೂ ಜೀನ್ಸ್ ಧರಿಸಲು ಅವಕಾಶ ನೀಡಲಾಗಿತ್ತು. ಆದರೆ 2021ರಲ್ಲಿ ಇಬ್ರಾಹಿಂ ರೈಸಿ ಇರಾನ್ ಅಧ್ಯಕ್ಷರಾಗುತ್ತಿದ್ದಂತೆ ಹಿಜಾಬ್​ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದ್ದರು. ಇದೀಗ ಮಹ್ಸಾ ಅಮಿನಿ ಸಾವಿನ ಬಳಿಕ ಆರಂಭವಾದ ಪ್ರತಿಭಟನೆ ಉಲ್ಬಣಗೊಂಡಿದೆ.

ಇದನ್ನೂ ಓದಿ: ಇರಾನ್‌ನ ಹಿಜಾಬ್ ವಿರೋಧಿ ಪ್ರತಿಭಟನೆಗೆ ಕೋಯಿಕ್ಕೋಡ್​ನಲ್ಲಿ ಸಾತ್​..

ABOUT THE AUTHOR

...view details