ದುಬೈ:2020 ರಲ್ಲಿ ಕ್ಷಿಪಣಿ ದಾಳಿ ನಡೆಸಿ ನಾಗರಿಕ ವಿಮಾನ ಪತನದಲ್ಲಿ 176 ಜನರ ಸಾವಿಗೆ ಕಾರಣವಾಗಿದ್ದ ಇರಾನ್ ತಪ್ಪೊಪ್ಪಿಗೆ ಹೇಳಿಕೆ ನೀಡಿತ್ತು. ಇದೀಗ 3 ವರ್ಷದ ನಂತರ ಪ್ರಕರಣದಲ್ಲಿ ವಾಯು ರಕ್ಷಣಾ ಕಮಾಂಡರ್ ನನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವಿಮಾನವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಮುನ್ನ ಕಮಾಂಡರ್ ನಿಯಮಾವಳಿಗಳನ್ನು ಅನುಸರಿಸಲಿಲ್ಲ. ಹೀಗಾಗಿ ಕಮಾಂಡರ್ ಈ ಪ್ರಕರಣದಲ್ಲಿ ತಪ್ಪೆಸಗಿದ್ದಾರೆ ಎಂದು 13 ವರ್ಷ ಜೈ ಶಿಕ್ಷೆ ವಿಧಿಸಿದೆ. ಅಲ್ಲದೇ, ಸಂತ್ರಸ್ಥ ಕುಟುಂಬಗಳಿಗೆ ದಂಡವನ್ನು ಪಾವತಿಸಲು ಎಂದು ಕೋರ್ಟ್ ಆದೇಶಿಸಿದೆ. ಜೊತೆಗೆ ಕ್ಷಿಪಣಿ ದಾಳಿ ನಡೆಸಲು ನೆರವಾದ ಇಬ್ಬರು ಸಿಬ್ಬಂದಿಗೂ ತಲಾ 1 ವರ್ಷ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಸುದೀರ್ಘ ವಿಚಾರಣೆಯ ನಂತರ, ನ್ಯಾಯಾಲಯವು ಕನಿಷ್ಠ 7 ಸಿಬ್ಬಂದಿ ಮತ್ತು ವಾಯು ರಕ್ಷಣಾ ಅಧಿಕಾರಿಗೆ ಜೈಲು ಶಿಕ್ಷೆ ವಿಧಿಸಿದೆ. ಕೋರ್ಟ್ ತೀರ್ಪಿನ ವಿರುದ್ಧ 20 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಬಹುದು. ವರದಿಯು ಯಾವುದೇ ಆರೋಪಿಗಳ ಹೆಸರು ಅಥವಾ ಹೆಚ್ಚಿನ ಮಾಹಿತಿ ನೀಡಿಲ್ಲ. ಸಂತ್ರಸ್ಥ ಕುಟುಂಬಗಳಿಗೆ 150,000 ಡಾಲರ್ ಪಾವತಿಸಲು ಇರಾನ್ ಸರ್ಕಾರಕ್ಕೆ ಸೂಚಿಸಲಾಗಿದೆ. ಈ ಹಣವನ್ನು ಕುಟುಂಬಗಳಿಗೆ ಹೇಗೆ ತಲುಪಿಸಲಾಗುತ್ತದೆ ಎಂಬುದರ ಮಾಹಿತಿಯನ್ನೂ ವಿವರಿಸಲಾಗಿಲ್ಲ.
ವಿಚಾರಣೆಯ ವಿರುದ್ಧ ಟೀಕೆ:ಘಟನೆಯ ಬಳಿಕ ಕೋರ್ಟ್ನ ವಿಚಾರಣೆಯ ಮೇಲೆಯೇ ಸಂತ್ರಸ್ತ ಕುಟುಂಬಗಳು ಟೀಕೆ ಮಾಡಿದ್ದವು. 2021 ರಲ್ಲಿ ಪ್ರಕರಣದ ವಿಚಾರಣೆ ಪ್ರಾರಂಭವಾದಾಗಿನಿಂದಲೂ ಅಂತಾರಾಷ್ಟ್ರೀಯವಾಗಿ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಗಳನ್ನು ಕೋರ್ಟ್ ನ್ಯಾಯಸಮ್ಮತವಾಗಿ ತನಿಖೆ ನಡೆಸುತ್ತಿಲ್ಲ. ಒಮ್ಮೆಯೂ ಕೋರ್ಟ್ ಮುಂದೆ ಹಾಜರು ಮಾಡಿಲ್ಲ ಎಂದು ನ್ಯಾಯಾಲಯದ ನ್ಯಾಯಸಮ್ಮತತೆಯ ಮೇಲೆ ಅನುಮಾನಗಳನ್ನು ಮೂಡಿಸಿತ್ತು. ಇದೀಗ 3 ವರ್ಷಗಳ ಬಳಿಕ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಘಟನೆ ಏನು?:2020 ರಲ್ಲಿ ಅಮೆರಿಕ ಮತ್ತು ಇರಾನ್ ಮಧ್ಯೆ ನಡೆಯುತ್ತಿದ್ದ ತಿಕ್ಕಾಟದಲ್ಲಿ ಉಕ್ರೇನ್ಗೆ ಸೇರಿದ ಬೋಯಿಂಗ್ 737 ವಿಮಾನವನ್ನು ಶತ್ರುಪಡೆಯ ವಿಮಾನ ಎಂದು ಭಾವಿಸಿ ಇರಾನ್ ವಾಯು ರಕ್ಷಣಾ ಪಡೆ ಕ್ಷಿಪಣಿ ದಾಳಿ ನಡೆಸಿ ಹೊಡೆದುರುಳಿಸಿತ್ತು. ಇದರಿಂದ ವಿಮಾನದಲ್ಲಿದ್ದ 176 ಜನರು ಸಾವಿಗೀಡಾಗಿದ್ದರು. ಈ ದುರಂತದ ಬಳಿಕ ಅಂತಾರಾಷ್ಟ್ರೀಯವಾಗಿ ಇರಾನ್ ಟೀಕೆಗೆ ಗುರಿಯಾಗಿತ್ತು. ನಾಗರಿಕರ ಸಾವಿಗೆ ಕಾರಣವಾದ ಇರಾನ್ ವಿರುದ್ಧ ಹಲವು ರಾಷ್ಟ್ರಗಳು ಮುನಿಸಿಕೊಂಡು ವಾಯುಗಡಿಯನ್ನೇ ಬಂದ್ ಮಾಡಿದ್ದವು.
ವಿಮಾನದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುವ ಮುನ್ನ ಬಾಗ್ದಾದ್‌ನಲ್ಲಿ ಇರಾನ್‌ನ ಉನ್ನತ ಜನರಲ್ ಆಗಿದ್ದ ಖಾಸೆಮ್ ಸೊಲೈಮಾನಿಯನ್ನು ಅಮೆರಿಕ ಡ್ರೋನ್ ದಾಳಿ ನಡೆಸಿ ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್ ಸೇನೆ ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಿತ್ತು.
ಇದನ್ನೂ ಓದಿ:ಟರ್ಕಿಯ ರುಮೆಸಾ ಗೆಲ್ಗಿ ವಿಶ್ವದ ಅತಿ ಎತ್ತರದ ಮಹಿಳೆ! ಇವರ ಹೈಟು ಗೊತ್ತೇ?