ಜಿನೀವಾ : ಯಾವುದೇ ನಿರ್ದಿಷ್ಟ ವೈರಸ್ ಸೋಂಕೊಂದು ಸಾಂಕ್ರಾಮಿಕವಾಗುವ ಮೊದಲೇ ಆ ರೋಗದ ಹರಡುವಿಕೆಯನ್ನು ಪತ್ತೆ ಹಚ್ಚಲು ಮತ್ತು ಪ್ರತಿಕ್ರಿಯಿಸಲು ಹಾಗೂ ವಾಡಿಕೆಯ ರೋಗ ಕಣ್ಗಾವಲು ಉತ್ತಮಗೊಳಿಸಲು ಸಹಾಯಕವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ (WHO)ಯು ಶನಿವಾರ ಹೊಸ ಜಾಗತಿಕ ನೆಟ್ವರ್ಕ್ ಒಂದನ್ನು ಘೋಷಿಸಿದೆ. ಅಂತಾರಾಷ್ಟ್ರೀಯ ರೋಗಕಾರಕ ಕಣ್ಗಾವಲು ನೆಟ್‌ವರ್ಕ್ (The International Pathogen Surveillance Network- IPSN) ದೇಶಗಳು ಮತ್ತು ಪ್ರದೇಶಗಳನ್ನು ಸಂಪರ್ಕಿಸಲು ವೇದಿಕೆಯನ್ನು ಒದಗಿಸುತ್ತದೆ. ಸಾರ್ವಜನಿಕ ಆರೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಈ ಡೇಟಾ ಬಳಸಿಕೊಂಡು ಮಾದರಿಗಳನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಮತ್ತು ಆ ಮಾಹಿತಿಯನ್ನು ಹೆಚ್ಚು ವಿಶಾಲವಾಗಿ ಹಂಚಿಕೊಳ್ಳುವ ವ್ಯವಸ್ಥೆಗಳನ್ನು ಈ ನೆಟ್ವರ್ಕ್ ಸುಧಾರಿಸುತ್ತದೆ.
ರೋಗಕಾರಕ ಜೀನೋಮಿಕ್ಸ್ ಇದು ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ರೋಗಕಾರಕ ಜೀವಿಗಳು ಎಷ್ಟು ಮಾರಕವಾಗಿವೆ, ಎಷ್ಟು ಸಾಂಕ್ರಾಮಿಕವಾಗಿವೆ ಮತ್ತು ಅವು ಹೇಗೆ ಹರಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆನುವಂಶಿಕ ಸಂಕೇತವನ್ನು ವಿಶ್ಲೇಷಿಸುತ್ತದೆ. ಈ ಮಾಹಿತಿಯನ್ನು ಬಳಸಿ ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ವ್ಯಾಪಕವಾದ ರೋಗ ಕಣ್ಗಾವಲು ವ್ಯವಸ್ಥೆಯ ಭಾಗವಾಗಿ ಏಕಾಏಕಿ ಸೋಂಕು ತಡೆಗಟ್ಟಲು ಮತ್ತು ಪ್ರತಿಕ್ರಿಯಿಸಲು, ಅದೇ ಸಮಯದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ರೋಗಗಳನ್ನು ಗುರುತಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು.
ಈ ಹೊಸ ನೆಟ್‌ವರ್ಕ್‌ನ ಗುರಿಯು ಪ್ರತಿ ದೇಶಕ್ಕೂ ಅದರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಭಾಗವಾಗಿ ರೋಗಕಾರಕ ಜೀನೋಮಿಕ್ ಅನುಕ್ರಮ ಮತ್ತು ವಿಶ್ಲೇಷಣೆಗೆ ಪ್ರವೇಶವನ್ನು ನೀಡುವುದಾಗಿದೆ. ಜೊತೆಗೆ ಇದು ಆರೋಗ್ಯ ಭದ್ರತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಎಲ್ಲರೂ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ವಿರುದ್ಧ ಒಟ್ಟಾಗಿ ಹೋರಾಡಿದಾಗ ಮಾತ್ರ ಆ ಹೋರಾಟ ಬಲವಾಗಿರುತ್ತದೆ ಎಂಬುದು ನಮಗೆ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಡಬ್ಲ್ಯೂಎಚ್ಓ ಡೈರೆಕ್ಟರ್ ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.