ವಿಶ್ವಸಂಸ್ಥೆ : ಗಾಜಾ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಲಿದ್ದು, ಇಸ್ರೇಲ್ ದೂರಗಾಮಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಇರಾನ್ ಎಚ್ಚರಿಕೆಯ ಸಂದೇಶ ನೀಡಿದೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿನ ಇರಾನ್ ಮಿಷನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಗಾಜಾ ಪ್ರದೇಶದ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದರೆ ತಾನು ಅದಕ್ಕೆ ಪ್ರತಿಕ್ರಿಯಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದೆ.
"ಇಸ್ರೇಲ್ ತನ್ನ ವರ್ಣಭೇದ ನೀತಿಯ ಯುದ್ಧಾಪರಾಧಗಳು ಮತ್ತು ನರಮೇಧವನ್ನು ತಕ್ಷಣ ನಿಲ್ಲಿಸದಿದ್ದರೆ, ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಬಹುದು ಮತ್ತು ದೂರಗಾಮಿ ಪರಿಣಾಮಗಳನ್ನು ಉಂಟುಮಾಡಬಹುದು. ಇದನ್ನು ತಡೆಗಟ್ಟುವ ಜವಾಬ್ದಾರಿ ವಿಶ್ವಸಂಸ್ಥೆ, ಭದ್ರತಾ ಮಂಡಳಿ ಮತ್ತು ಕೌನ್ಸಿಲ್ ರಾಷ್ಟ್ರಗಳ ಮೇಲಿದೆ" ಎಂದು ಇರಾನ್ನ ಯುಎನ್ ಮಿಷನ್ ಪೋಸ್ಟ್ ಮಾಡಿದೆ.
ಜನನಿಬಿಡ ಪ್ರದೇಶವಾಗಿರುವ ಗಾಜಾದಲ್ಲಿ ವಾಸಿಸುವ ಪ್ಯಾಲೆಸ್ಟೈನಿಯರು ಈಜಿಪ್ಟ್ನ ಮುಚ್ಚಿದ ಗಡಿಯ ಕಡೆಗೆ ದಕ್ಷಿಣಕ್ಕೆ ಪಲಾಯನ ಮಾಡುವಂತೆ ಇಸ್ರೇಲ್ ಎಚ್ಚರಿಕೆ ನೀಡಿದೆ. ಗಾಜಾ ಪಟ್ಟಿಯಲ್ಲಿ ಇರಾನ್ ಬೆಂಬಲಿತ ಹಮಾಸ್ ವಿರುದ್ಧ ನೆಲದ ಮೂಲಕ ದಾಳಿ ನಡೆಸಲು ಇಸ್ರೇಲ್ ಶನಿವಾರ ಸಿದ್ಧತೆ ನಡೆಸಿತ್ತು. ಒಂದು ವಾರದ ಹಿಂದೆ ಹಮಾಸ್ ಇಸ್ಲಾಮಿಸ್ಟ್ ಗುಂಪು ನಡೆಸಿದ ದಾಳಿಗೆ ಪ್ರತೀಕಾರವಾಗಿ ಹಮಾಸ್ ಅನ್ನು ನಿರ್ನಾಮ ಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ. ಹಮಾಸ್ ಇಸ್ರೇಲಿ ಪಟ್ಟಣಗಳ ಮೇಲೆ ದಾಳಿ ನಡೆಸಿ 1,300 ಜನರನ್ನು ಕೊಂದು ಹಲವಾರು ಜನರನ್ನು ಒತ್ತೆಯಾಳಾಗಿ ಎಳೆದುಕೊಂಡು ಹೋಗಿತ್ತು.