ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದಾದ್ಯಂತ ಇಂಟರ್ನೆಟ್ ಸೇವೆಗಳನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಬುಧವಾರ ತಿಳಿಸಿದೆ. ಆಂತರಿಕ ಸಚಿವಾಲಯದ ನಿರ್ದೇಶನದ ಮೇರೆಗೆ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನಿರ್ಬಂಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರವು ದೃಢಪಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಂಗಳವಾರ ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ಬಂಧಿಸಿದ ನಂತರ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿರುವುದರಿಂದ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.
ಇದಲ್ಲದೇ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಸಾಮಾಜಿಕ ಮಾಧ್ಯಮ ಸೈಟ್‌ಗಳು ಕೂಡ ಡೌನ್ ಆಗಿವೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ನಂತರ ಹಿಂಸಾಚಾರ ಮತ್ತು ಗಲಭೆಯ ವಿಡಿಯೋಗಳನ್ನು ವ್ಯಾಪಕವಾಗಿ ಇಂಟರ್ನೆಟ್ನಲ್ಲಿ ಶೇರ್ ಮಾಡಲಾಗಿತ್ತು. ಹೀಗಾಗಿ ಇವುಗಳ ಮೂಲಕ ಮತ್ತಷ್ಟು ಗಲಭೆಗೆ ಪ್ರಚೋದನೆ ಆಗದಂತೆ ತಡೆಯಲು ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಬಂದ್ ಮಾಡಲಾಗಿದೆ. ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸ್ಥಗಿತಗೊಂಡಿರುವ ವರದಿಗಳನ್ನು ನಿಯಂತ್ರಣ ಪ್ರಾಧಿಕಾರವು ಸ್ವೀಕರಿಸುತ್ತಿದೆ ಎಂದು ಪಿಟಿಎ ವಕ್ತಾರರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಹಿಂಸಾ ಪ್ರಚೋದಕ ವಿಡಿಯೋಗಳನ್ನು ಶೇರ್ ಮಾಡಿದ ನಂತರ ರಾತ್ರಿ 8 ಗಂಟೆ ಸುಮಾರಿಗೆ ಇಂಟರ್ನೆಟ್ ನಿಧಾನವಾಗಲಾರಂಭಿಸಿತು. ಇಂಟರ್ನೆಟ್ ಬಂದ್ ಆಗಿರುವ ಬಗ್ಗೆ ಮಾತನಾಡಿದ ನಾಗರಿಕರೊಬ್ಬರು - ಇಂದಿನ ಯುಗದಲ್ಲಿ ಇಂಟರ್ನೆಟ್ ಇಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ನಾನು ವೃತ್ತಿಪರ ಆಗಿಲ್ಲದಿದ್ದರೂ ಟಿವಿ ನೋಡುವುದು ನನ್ನ ಹವ್ಯಾಸ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜಕೀಯ ಬೆಳವಣಿಗೆಗಳಾಗುತ್ತಿರುವಾಗಲೂ ಟಿವಿ ಟ್ಯೂನ್ ಮಾಡಲಾಗುತ್ತಿಲ್ಲ. ನನ್ನ ಟಿವಿ ಚಂದಾದಾರಿಕೆಯು ಇಂಟರ್ನೆಟ್ ಚಂದಾದಾರಿಕೆಗೆ ಕ್ಲಬ್ ಆಗಿರುವುದು ಸಮಸ್ಯೆಯಾಗಿದೆ ಎಂದು ಹೇಳಿದರು.