ಒಟ್ಟಾವಾ : ಕೆನಡಾದಲ್ಲಿ ಕಾಳ್ಗಿಚ್ಚಿನ ಘಟನೆಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಸೆಪ್ಟೆಂಬರ್ನಲ್ಲಿಯೂ ಬೆಂಕಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲವೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಈ ವರ್ಷ ರಾಷ್ಟ್ರದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನ ಘಟನೆಗಳ ಬಗ್ಗೆ ಮಾಹಿತಿ ನೀಡಿದ ಕೆನಡಾದ ಫೆಡರಲ್ ಅಧಿಕಾರಿಗಳು, ದೇಶದಲ್ಲಿ ಈ ವರ್ಷ ಒಟ್ಟಾರೆ 6,174 ಕಾಳ್ಗಿಚ್ಚಿನ ಘಟನೆಗಳು ಸಂಭವಿಸಿದ್ದು, ಎರಡು ಕಾಳ್ಗಿಚ್ಚುಗಳು ಒಂದು ಮಿಲಿಯನ್ ಹೆಕ್ಟೇರ್ವರೆಗೆ ಹರಡಿವೆ ಎಂದು ತಿಳಿಸಿದ್ದಾರೆ.
ಕೆನಡಿಯನ್ ಇಂಟರ್ಜೆನ್ಸಿ ಫಾರೆಸ್ಟ್ ಫೈರ್ ಸೆಂಟರ್ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ದೇಶಾದ್ಯಂತ ಸುಮಾರು 1,000 ಕಾಳ್ಗಿಚ್ಚು ಕಾಣಿಸಿಕೊಂಡಿವೆ ಮತ್ತು 600ಕ್ಕೂ ಹೆಚ್ಚು ಕಾಳ್ಗಿಚ್ಚುಗಳು ನಿಯಂತ್ರಣ ಮೀರಿ ಸಾಗಿವೆ ಎಂದು ಹೇಳಿದೆ. ಆಲ್ಬರ್ಟಾ ಪ್ರಾಂತ್ಯದ ಪೂರ್ವಾರ್ಧದಿಂದ ಒಂಟಾರಿಯೊವರೆಗೆ ಮಧ್ಯ ಕೆನಡಾದಾದ್ಯಂತ ಕಾಳ್ಗಿಚ್ಚುಗಳ ಕೆನ್ನಾಲಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನ್ಯಾಚುರಲ್ ರಿಸೋರ್ಸಸ್ ಕೆನಡಾದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಕಳೆದ ತಿಂಗಳು ನೀಡಲಾದ ಮುನ್ಸೂಚನೆಯ ಪ್ರಕಾರ ಕಾಳ್ಗಿಚ್ಚುಗಳು ಸಂಭವಿಸುತ್ತಿವೆ. ದಕ್ಷಿಣ ಬ್ರಿಟಿಷ್ ಕೊಲಂಬಿಯಾ, ಪ್ರೈರೀಸ್, ವಾಯುವ್ಯ ಪ್ರದೇಶಗಳ ಭಾಗ ಮತ್ತು ಪಶ್ಚಿಮ ಒಂಟಾರಿಯೊಗಳಲ್ಲಿ ಗಂಭೀರ ಸ್ವರೂಪದ ಕಾಳ್ಗಿಚ್ಚುಗಳು ಸಂಭವಿಸಬಹುದು ಎಂದು ಮುನ್ಸೂಚನೆ ನೀಡಲಾಗಿತ್ತು" ಎಂದು ನ್ಯಾಚುರಲ್ ರಿಸೋರ್ಸಸ್ ಕೆನಡಾದ ಮಹಾನಿರ್ದೇಶಕ ಮೈಕೆಲ್ ಮಾರ್ಟಿನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಇತ್ತೀಚಿನ ತಿಂಗಳುಗಳಲ್ಲಿ, ಉಲ್ಬಣಗೊಂಡ ಕಾಳ್ಗಿಚ್ಚು ದೇಶದ ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯಾಗುವ ಆತಂಕ ಮೂಡಿಸಿದೆ. ಹಾಗಾಗಿ 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಜನರನ್ನು ಸ್ಥಳಾಂತರಿಸುವ ಅನಿವಾರ್ಯತೆ ಉಂಟಾಗಿದೆ.