ಇಂಡೋನೇಷ್ಯಾ : ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಹಾಗೂ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ಮೌಂಟ್ ಮೆರಾಪಿ ಶನಿವಾರ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು. ಇದರ ಪರಿಣಾಮ ದಟ್ಟವಾದ ಹೊಗೆ ಮತ್ತು ಬೂದಿ ಹೊರ ಚಿಮ್ಮಿದ್ದು, ಅಕ್ಕಪಕ್ಕದ ಹಳ್ಳಿಗಳನ್ನು ಅವರಿಸಿದೆ. ಬೂದಿಯು ಶಿಖರದಿಂದ ಸುಮಾರು 9,600 ಅಡಿ (3,000 ಮೀಟರ್) ಎತ್ತರ ಹಾರಿರುವ ಸಾಧ್ಯತೆಯನ್ನು ಮೆರಾಪಿ ಜ್ವಾಲಾಮುಖಿ ವೀಕ್ಷಣಾಲಯ ಅಂದಾಜಿಸಿದೆ.
"ಜಾವಾದ ಜನನಿಬಿಡ ದ್ವೀಪದಲ್ಲಿರುವ ಮೆರಾಪಿಯ ಬಿಸಿ ಬೂದಿ, ಕಲ್ಲು, ಲಾವಾ ಮತ್ತು ಅನಿಲದ ಮಿಶ್ರಣವು ಇಳಿಜಾರು ಪ್ರದೇಶಗಳಲ್ಲಿ 7 ಕಿಲೋಮೀಟರ್ (4.3 ಮೈಲುಗಳು) ವರೆಗೆ ಹರಿದು ಬಂದಿದೆ. ಜ್ವಾಲಾಮುಖಿಯು ಅಪಾಯಕಾರಿ ಅನಿಲ ಮತ್ತು ಬಿಸಿ ಮೋಡಗಳನ್ನು ಸೃಷ್ಟಿಸಿದೆ. ಗಾಳಿಯಲ್ಲಿ ಇಂಥ ಬಿಸಿ ಮೋಡಗಳು 100 ಮೀಟರ್ ಮೇಲೆ ಏರಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಅಬ್ದುಲ್ ಮುಹಾರಿ ಹೇಳಿದರು. ಸ್ಫೋಟದ ನಂತರ ಅಧಿಕಾರಿಗಳು ಕುಳಿಯಿಂದ ಏಳು ಕಿಲೋಮೀಟರ್ ಪ್ರದೇಶವನ್ನು ಸದ್ಯಕ್ಕೆ 'ನಿರ್ಬಂಧಿತ ವಲಯ' ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ:ಐಸ್‌ಲ್ಯಾಂಡ್‌ನ ಮೌಂಟ್ ಫಾಗ್ರಾಡಾಲ್ಸ್‌ಫ್ಜಾಲ್ ಬಳಿಯ ಕಣಿವೆಯಲ್ಲಿ ಉಕ್ಕಿ ಹರಿಯುತ್ತಿರುವ ಲಾವಾ ರಸ
"ಇದುವರೆಗೂ ಜ್ವಾಲಾಮುಖಿಯಿಂದ ಯಾವುದೇ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಕನಿಷ್ಠ ಎಂಟು ಗ್ರಾಮಗಳಿಗೆ ಜ್ವಾಲಾಮುಖಿ ಬೂದಿ ಹಬ್ಬಿದೆ. ಮೌಂಟ್ ಮೆರಾಪಿ ಸ್ಫೋಟದಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಆ ಭಾಗದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಯಾವುದೇ ಚಟುವಟಿಕೆಗಳಲ್ಲಿ ತೊಡಗದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.