ಜಕಾರ್ತಾ:ಇಂಡೋನೇಷ್ಯಾದ ಪ್ರಮುಖ ದ್ವೀಪ ಜಾವಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 162 ಮಂದಿ ಮೃತಪಟ್ಟಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.6ರಷ್ಟು ದಾಖಲಾಗಿತ್ತು. ಮೃತರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ.
ಹಲವು ಮನೆಗಳು ಮತ್ತು ಕಟ್ಟಡಗಳು ಕುಸಿದು ಬಿದ್ದಿವೆ. ಕೆಲವರು ತಮ್ಮ ಮಕ್ಕಳೊಂದಿಗೆ ಕಣ್ಣೀರು ಹಾಕುತ್ತಾ ಮನೆಗಳಿಂದ ಓಡಿ ಬಂದರು. ಕಟ್ಟಡಗಳ ಅವಶೇಷಗಳಡಿ ಸಿಲುಕಿದವರ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಜೆದಿಲ್ ಎಂಬ ಹಳ್ಳಿಯೊಂದರಲ್ಲೇ ಸುಮಾರು 25ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ತಂಡಗಳು ಕುಸಿದ ಮನೆಗಳ ಅವಶೇಷಗಳಡಿ ಹೂತು ಹೋಗಿರುವವರ ಹುಡುಕಾಟ ನಡೆಸುತ್ತಿದ್ದಾರೆ. ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳಿಗೆ ಆಸ್ಪತ್ರೆಗಳ ಒಳಗೆ, ಹೊರಗೆ, ಟೆರೆಸ್, ಪಾರ್ಕಿಂಗ್ ಸ್ಥಳಗಳಲ್ಲೆಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಾಜಧಾನಿ ಜಕಾರ್ತಾದಿಂದ 75 ಕಿ.ಮೀ ದೂರದ ಪಶ್ಚಿಮ ಜಾವಾ ಪ್ರಾಂತ್ಯದ ಸಿಯಾಂಜುರ್ ಪ್ರದೇಶದ 10 ಕಿ.ಮೀ (6.2 ಮೈಲಿ) ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರದೇಶವು 2.5 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿದೆ.