ನ್ಯೂಯಾರ್ಕ್( ಅಮೆರಿಕ):ಭಯೋತ್ಪಾದನೆ, ಜಾಗತಿಕ ದಕ್ಷಿಣ ಮತ್ತು ಕಡಲ ಭದ್ರತೆಯ ಮೇಲೆ ವಿಶೇಷ ಗಮನಹರಿಸುವುದರೊಂದಿಗೆ ಭಾರತವು ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ತನ್ನ ಡಿಸೆಂಬರ್ ಅಧ್ಯಕ್ಷತೆಯನ್ನು ಮುಕ್ತಾಯಗೊಳಿಸಿದೆ. ಮಾಸಿಕ ಬದಲಾವಣೆಯ ಆಧಾರದಲ್ಲಿ ಡಿಸೆಂಬರ್ 1ರಂದು ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು.
ವಿಶ್ವಸಂಸ್ಥೆ ಭದ್ರತಾ ಮಂಡಳಿ ವರ್ಷದ ಕೊನೆಯ ನಿಗದಿತ ಸಭೆ ಮತ್ತು ಮಂಡಳಿಯಲ್ಲಿ ಭಾರತದ ಸದಸ್ಯತ್ವದ ಅವಧಿಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಕಳೆದ ಎರಡು ವರ್ಷಗಳಲ್ಲಿ, ನಾವು ಶಾಂತಿ, ಭದ್ರತೆ ಮತ್ತು ಸಮೃದ್ಧಿಯ ಪರವಾಗಿ ಮಾತನಾಡಿದ್ದೇವೆ. ಭಯೋತ್ಪಾದನೆಯಂತಹ ಮಾನವೀಯತೆಯ ವಿರುದ್ಧದ ಸಾಮಾನ್ಯ ಶತ್ರುಗಳ ವಿರುದ್ಧ ಧ್ವನಿ ಎತ್ತುವಲ್ಲಿ ನಾವು ಹಿಂಜರಿಯಲಿಲ್ಲ ಎಂದು ಹೇಳಿದರು. ಭದ್ರತಾ ಮಂಡಳಿಯಲ್ಲಿ 2021-2022 ರ ಅವಧಿಯ ಎರಡು ವರ್ಷಗಳ ಸದಸ್ಯತ್ವ ಮುಗಿಸಿ ನಿರ್ಗಮಿಸಲು ಭಾರತ ಸಜ್ಜಾಗಿದ್ದು, ಡಿ.31ಕ್ಕೆ ಇದು ಕೊನೆಗೊಳ್ಳಲಿದೆ.