ಬಾಲಿ (ಇಂಡೋನೇಷ್ಯಾ): ಭಾರತದ ಜಿ 20 ಅಧ್ಯಕ್ಷ ಸ್ಥಾನವು ಎಲ್ಲರನ್ನೂ ಒಳಗೊಳ್ಳುವ, ಮಹತ್ವಾಕಾಂಕ್ಷೆ, ನಿರ್ಣಾಯಕ ಮತ್ತು ಕಾರ್ಯ ಆಧಾರಿತವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ಬುಧವಾರ ನಡೆದ ಜಿ20 ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರು ಜಿ 20 ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಿದರು. ಇದೇ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ಜಗತ್ತು ಏಕಕಾಲದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಆರ್ಥಿಕ ಮಂದಗತಿ, ಹೆಚ್ಚುತ್ತಿರುವ ಆಹಾರ ಮತ್ತು ಇಂಧನ ಬೆಲೆಗಳು ಮತ್ತು ದೀರ್ಘಾವಧಿ ಸಂಘರ್ಷ, ಕೋವಿಡ್ ಸಾಂಕ್ರಾಮಿಕದ ಅವಧಿಯ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಭಾರತವು ಜಿ 20 ಶೃಂಗಸಭೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು.
ಅಲ್ಲದೇ, ಇಂತಹ ಸಂದರ್ಭದಲ್ಲಿ ಜಗತ್ತು ಕೂಡ ಜಿ20ಯತ್ತ ಭರವಸೆಯಿಂದ ನೋಡುತ್ತಿದೆ. ಭಾರತದ ಜಿ20 ಅಧ್ಯಕ್ಷ ಸ್ಥಾನವು ಅಂತರ್ಗತ, ಮಹತ್ವಾಕಾಂಕ್ಷೆ, ನಿರ್ಣಾಯಕ ಮತ್ತು ಕಾರ್ಯ ಆಧಾರಿತವಾಗಿರುತ್ತದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಭಾರತೀಯರಿಗೆ 3000 ವೀಸಾ ನೀಡಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಸಿರು ನಿಶಾನೆ
ಮುಂದಿನ ಒಂದು ವರ್ಷದಲ್ಲಿ ಭಾರತವು ಜಿ20 ಅಧ್ಯಕ್ಷತೆ ವಹಿಸಿ, ಹೊಸ ಆಲೋಚನೆಗಳನ್ನು ರೂಪಿಸಲು ಮತ್ತು ಸಾಮೂಹಿಕ ಕ್ರಿಯೆಯನ್ನು ವೇಗಗೊಳಿಸಲು ಜಾಗತಿಕ ಪ್ರಧಾನ ಚಲನಶೀಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸುತ್ತೇವೆ. ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಮಾಲೀಕತ್ವದ ಭಾವನೆಯು ಇಂದು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇದು ಪರಿಸರದ ದುಃಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಗ್ರಹದ ಸುರಕ್ಷಿತ ಭವಿಷ್ಯಕ್ಕಾಗಿ ಟ್ರಸ್ಟಿಶಿಪ್ ಪ್ರಜ್ಞೆಯು ಪರಿಹಾರವಾಗಿದೆ ಎಂದು ಪ್ರಧಾನಿ ತಿಳಿಸಿದರು.
ಇದೇ ವೇಳೆ, Life ಅಂದರೆ Lifestyle for Environment ಎಂಬ ಅಭಿಯಾನವು ಇದಕ್ಕೆ ದೊಡ್ಡ ಕೊಡುಗೆ ನೀಡಬಹುದು. ಸುಸ್ಥಿರ ಜೀವನಶೈಲಿಯನ್ನು ಸಾಮೂಹಿಕ ಚಳವಳಿಯನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ ಎಂದು ಶೃಂಗಸಭೆಯ ಕೊನೆಯ ದಿನದಂದು ವಿಶ್ವ ನಾಯಕರ ಸಭೆಯಲ್ಲಿ ಮೋದಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ:2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ: ಡೋನಾಲ್ಡ್ ಟ್ರಂಪ್ ಘೋಷಣೆ
ಶಾಂತಿ ಮತ್ತು ಭದ್ರತೆ ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಗಳು ಆರ್ಥಿಕ ಬೆಳವಣಿಗೆ ಅಥವಾ ತಾಂತ್ರಿಕ ಆವಿಷ್ಕಾರದ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಎಂದ ಪ್ರಧಾನಿ ಮೋದಿ, ಜಿ-20 ಶಾಂತಿ ಮತ್ತು ಸೌಹಾರ್ದದ ಪರವಾಗಿ ಬಲವಾದ ಸಂದೇಶವನ್ನು ರವಾನಿಸಬೇಕಾಗಿದೆ. ಈ ಎಲ್ಲ ಆದ್ಯತೆಗಳು ಭಾರತದ ಜಿ 20 ಅಧ್ಯಕ್ಷತೆಯಲ್ಲಿ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಪರಿಕಲ್ಪನೆ ಅಡಿಯಲ್ಲಿ ಕಾರ್ಯ ನಿರ್ವಹಿಸಿ ಸಂಪೂರ್ಣವಾಗಿ ಸಾಕಾರಗೊಳ್ಳಲಿವೆ ಎಂದರು.
ಇನ್ನು, ಭಾರತವು ಡಿಸೆಂಬರ್ 1ರಂದು ಅಧಿಕೃತವಾಗಿ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಭಾರತ ಅಧ್ಯಕ್ಷತೆಯು 2023ರ ನವೆಂಬರ್ 20ರವರೆಗೆ ಇರಲಿದೆ.
ಇದನ್ನೂ ಓದಿ:ಜಿ20 ಶೃಂಗಸಭೆ, 2ನೇ ದಿನ: ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ ಗಿಡ ನೆಟ್ಟ ವಿಶ್ವ ನಾಯಕರು