ಸಿಂಗಾಪುರ: ಬೇರೆ ದೇಶಕ್ಕೆ ವಲಸೆ ಹೋಗುವುದರಿಂದ ಅನೇಕ ಪ್ರಯೋಜನಗಳಿವೆ. ಇದು ಹೊಸ ಪರಿಸರದಲ್ಲಿ ಬದುಕಲು ಮತ್ತು ಹೊಸ ಜನರನ್ನ ಭೇಟಿ ಮಾಡಲು ಹಾಗೂ ವಿಭಿನ್ನ ಸಂಸ್ಕೃತಿಯನ್ನು ಅನುಭವಿಸಲು ಅವಕಾಶ ನೀಡುತ್ತದೆ. ಮಾತ್ರವಲ್ಲದೆ, ವಲಸೆಯು ವೃತ್ತಿಪರ ಅಭಿವೃದ್ಧಿ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಹ ಅವಕಾಶ ನೀಡುತ್ತದೆ. ಹೀಗೆ ವಲಸೆ ಪ್ರಯೋಜನವನ್ನು ಪಡೆಯಲು ಸಹೋದ್ಯೋಗಿ ಜೊತೆ ಸ್ವಂತ ಸೊಸೆಯನ್ನೇ ನಕಲಿ ಮದುವೆ ಮಾಡಿದ್ದ 73 ವರ್ಷದ ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರದಲ್ಲಿ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಮೀರನ್ ಗನಿ ನಾಗೂರ್ ಪಿಚ್ಚೈ ಶಿಕ್ಷೆಗೆ ಗುರಿಯಾದ ವ್ಯಕ್ತಿ. 2016 ರಲ್ಲಿ ಮೀರನ್ ಗನಿ ನಾಗೂರ್ ಪಿಚ್ಚೈ ಅವರು ಭಾರತೀಯ ಪ್ರಜೆ ಅಬ್ದುಲ್ ಖಾದರ್ ಕಾಸಿಮ್ (55) ಜೊತೆ ತಮ್ಮ 58 ವರ್ಷದ ಸಿಂಗಾಪುರದ ಸೊಸೆ ನೂರ್ಜಾನ್‌ಳನ್ನು ಮದುವೆಯಾಗುವಂತೆ ಕೇಳಿಕೊಂಡರು. ಇದರ ಮುಂದುವರೆದ ಭಾಗವಾಗಿ, ಮೀರನ್ ತನ್ನ ಸೊಸೆಯನ್ನು ತನ್ನ ಸಹೋದ್ಯೋಗಿಯ ಸ್ಪಾನ್ಸರ್ ಆಗುವಂತೆ ವ್ಯವಸ್ಥೆ ಮಾಡಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಲ್ಪಾವಧಿ ಭೇಟಿಯ ಪಾಸ್ ಹೊಂದಿದ ಪ್ರಯಾಣಿಕರು ಸಿಂಗಾಪುರಕ್ಕೆ ಪ್ರವೇಶಿಸಿದ ದಿನಾಂಕದಿಂದ 89 ದಿನಗಳ ವಿಸ್ತರಣೆಯನ್ನು ಬಯಸಿದರೆ ಸಾಮಾನ್ಯವಾಗಿ ಸ್ಥಳೀಯ ಪ್ರಾಯೋಜಕರ (ಸ್ಪಾನ್ಸರ್) ಅಗತ್ಯವಿರುತ್ತದೆ. ಹೀಗಾಗಿ, 2016ರಲ್ಲಿ ಭಾರತೀಯ ಪ್ರಜೆ ಅಬ್ದುಲ್ ಖಾದರ್ ಕಾಸಿಮ್ನು ತನ್ನ ಅಲ್ಪಾವಧಿಯ ಭೇಟಿಯ ಪಾಸ್ ಅನ್ನು ವಿಸ್ತರಿಸಲು ಬಯಸಿದ್ದ. ಆಗ ತಮ್ಮ ಸೊಸೆಯನ್ನು ಮದುವೆಯಾಗುವಂತೆ ಮಿರನ್ ತಿಳಿಸಿದ್ದ. ಬಳಿಕ ಕಾಸಿಮ್ನು ನೂರ್ಜಾನ್‌ಗೆ ಎಸ್‌ಜಿಡಿ 25,000 ಪಾವತಿಸಿದ್ದ. ಈ ವೇಳೆ ಆ ಮಹಿಳೆ ಸಹ ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ಸಹಾಯ ಮಾಡಲು ಒಪ್ಪಿಗೆ ನೀಡಿದ್ದಳು.
ಬಳಿಕ ಸೆಪ್ಟೆಂಬರ್ 17, 2016 ರಂದು ಶಾಸ್ತ್ರೋಕ್ತವಾಗಿ ಮದುವೆ ಕಾರ್ಯ ನೆರವೇರಿಸಲಾಗಿತ್ತು. ವಲಸೆ ಪ್ರಯೋಜನವನ್ನು ಪಡೆಯಲು ನೆಪ ಮಾತ್ರದ ಮದುವೆಯನ್ನು ಏರ್ಪಡಿಸಿದ್ದಕ್ಕಾಗಿ ಪಿಚ್ಚೈ ಅವರನ್ನು ವಲಸೆ ಮತ್ತು ಚೆಕ್‌ಪಾಯಿಂಟ್‌ಗಳ ಪ್ರಾಧಿಕಾರ (ICA) ಅಧಿಕಾರಿಗಳು ಕಳೆದ ವರ್ಷ ಬಂಧಿಸಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಕಾಸಿಮ್‌ಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದರೆ, ಈ ವರ್ಷದ ಫೆಬ್ರವರಿಯಲ್ಲಿ ನೂರ್ಜಾನ್‌ಗೆ ಏಳು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.