ಸಿಡ್ನಿ: ಸಿಡ್ನಿಯ ಪಶ್ಚಿಮ ಉಪನಗರ ಮೆರ್ರಿಲ್ಯಾಂಡ್ಸ್‌ನಲ್ಲಿ ಶುಕ್ರವಾರ 23 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಖಲಿಸ್ತಾನ್ ಬೆಂಬಲಿಗರು ಒದ್ದು, ಥಳಿಸಿ ದೌರ್ಜನ್ಯವೆಸಗಿದ್ದಾರೆ. ಅಲ್ಲದೇ ಲೋಹದ ರಾಡ್‌ನಿಂದ ವಿದ್ಯಾರ್ಥಿಯನ್ನು ಪದೇ ಪದೆ ಹೊಡೆದಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಚಾಲಕನಾಗಿ ಕೆಲಸ ಮಾಡುವ ವಿದ್ಯಾರ್ಥಿಯು ಮುಂಜಾನೆ ಕೆಲಸಕ್ಕೆ ಹೋಗುತ್ತಿದ್ದಾಗ, ಬೂದು ಬಣ್ಣದ ಸೆಡಾನ್‌ನಲ್ಲಿ ಬಂದ ನಾಲ್ವರು ವ್ಯಕ್ತಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
“ನಾನು ಡ್ರೈವಿಂಗ್ ಸೀಟಿನಲ್ಲಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಎಲ್ಲಿಂದಲೋ ಬಂದ ಖಲಿಸ್ತಾನ್ ಬೆಂಬಲಿಗರು ನನ್ನ ಮೇಲೆ ದೌರ್ಜನ್ಯ ನಡೆಸಿದರು. ಅವರಲ್ಲಿ ಒಬ್ಬಾತ ನನ್ನ ವಾಹನದ ಎಡಭಾಗದ ಬಾಗಿಲನ್ನು ತೆರೆದು ನನ್ನ ಎಡಗಣ್ಣಿನ ಕೆಳಗೆ ಕೆನ್ನೆಯ ಮೇಲೆ ಕಬ್ಬಿಣದ ರಾಡ್‌ನಿಂದ ಹೊಡೆದ” ಎಂದು ವಿದ್ಯಾರ್ಥಿ ತಿಳಿಸಿದರು. ದಾಳಿಕೋರರ ಪೈಕಿ ಇಬ್ಬರು ತಮ್ಮ ಫೋನ್‌ಗಳಲ್ಲಿ ದಾಳಿಯ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದರೆ, ನಾಲ್ಕೈದು ಜನರು ತನಗೆ ಹೊಡೆಯುತ್ತಿದ್ದರು. ದುಷ್ಕರ್ಮಿಗಳು ನಿರಂತರವಾಗಿ ಖಲಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿದ್ದರು ಎಂದು ವಿದ್ಯಾರ್ಥಿ ತಿಳಿಸಿದರು.
"ಖಲಿಸ್ತಾನ್ ವಿಷಯವನ್ನು ವಿರೋಧಿಸಿದ್ದಕ್ಕೆ ಇದು ನಿನಗೆ ಪಾಠವಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂಥ ಮತ್ತಷ್ಟು ಪಾಠ ಕಲಿಸಲಾಗುವುದು ಎಂದು ಬೆದರಿಸಿದರು. ಇದೆಲ್ಲವೂ ಐದು ನಿಮಿಷಗಳಲ್ಲಿ ಮುಗಿದು ಹೋಯಿತು" ಎಂದು ಸಂತ್ರಸ್ತ ವಿದ್ಯಾರ್ಥಿ ಹೇಳಿಕೊಂಡರು. ಘಟನೆಯನ್ನು ನೋಡಿದ ದಾರಿಹೋಕರು ಮಾಹಿತಿ ನೀಡಿದ ನಂತರ ನ್ಯೂ ಸೌತ್ ವೇಲ್ಸ್ (NSW) ಪೊಲೀಸರು ಸ್ಥಳಕ್ಕೆ ವೈದ್ಯರೊಂದಿಗೆ ಆಗಮಿಸಿದರು.
"ವಿದ್ಯಾರ್ಥಿಯ ಮೇಲೆ ದಾಳಿ ನಡೆದ ಮಾಹಿತಿ ಬಂದ ಕೂಡಲೇ ಶುಕ್ರವಾರ ಬೆಳಗ್ಗೆ 5.40 ರ ನಂತರ ಕಂಬರ್‌ಲ್ಯಾಂಡ್ ಪೊಲೀಸ್ ಏರಿಯಾ ಕಮಾಂಡ್‌ಗೆ ಸಂಬಂಧಿಸಿದ ಅಧಿಕಾರಿಗಳು ರೂಪರ್ಟ್ ಸ್ಟ್ರೀಟ್, ಮೆರ್ರಿಲ್ಯಾಂಡ್ಸ್ ವೆಸ್ಟ್ ಪ್ರದೇಶಕ್ಕೆ ಭೇಟಿ ನೀಡಿದರು" ಎಂದು ಎನ್‌ಎಸ್‌ಡಬ್ಲ್ಯೂ ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ. "23 ವರ್ಷದ ಯುವಕನನ್ನು ನಾಲ್ವರು ವ್ಯಕ್ತಿಗಳು ಒದ್ದು, ಲೋಹದ ರಾಡ್‌ನಿಂದ ಹೊಡೆದಿದ್ದಾರೆ. ತಲೆ, ಕಾಲು ಮತ್ತು ಭುಜಕ್ಕೆ ಗಂಭೀರ ಗಾಯವಾಗಿರುವ ಯುವಕನನ್ನು ವೆಸ್ಟ್ಮೀಡ್ ಆಸ್ಪತ್ರೆಗೆ ದಾಖಲಿಸಲಾಯಿತು." ಎಂದು ಪೊಲೀಸರು ತಿಳಿಸಿದರು.
ಆಸ್ಟ್ರೇಲಿಯ ಮಾಧ್ಯಮಗಳ ಪ್ರಕಾರ, ಸಂತ್ರಸ್ತ ಯುವಕನ ಮೊಣಕೈ ಜಾಗದಲ್ಲಿ ದೊಡ್ಡ ಗಾಯವಾಗಿದ್ದು, ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಘಟನೆಯ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ ಪೊಲೀಸರು, ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುವವರು ತಮ್ಮನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.
ಖಲಿಸ್ತಾನ ಚಳವಳಿಯ ಬೇರುಗಳು 1800 ರ ದಶಕದ ಕೊನೆಯಲ್ಲಿ ಮತ್ತು 1900 ರ ದಶಕದ ಆರಂಭದಲ್ಲಿ ಸಿಖ್ ಮತ್ತು ಹಿಂದೂಗಳನ್ನು ವಿಭಜಿಸಲು ಪ್ರಯತ್ನಿಸಿದ ಬ್ರಿಟಿಷ್ ವಸಾಹತುಶಾಹಿ ನೀತಿಗಳಲ್ಲಿವೆ. ಬ್ರಿಟಿಷ್ ರಾಜ್ ವಿರುದ್ಧ ಬಂಡಾಯವೆದ್ದ ಹಿಂದೂ ಆಡಳಿತಗಾರರ ವಿರುದ್ಧ ಬಳಸಲು ಸಿಖ್ಖರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಟಿಷ್ ಸೇನೆಗೆ ಸೇರಿಸಿಕೊಳ್ಳಲಾಯಿತು. ತರುವಾಯ, 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಪಂಜಾಬ್ ರಾಜ್ಯ ಮತ್ತು ಭಾರತ ಸರ್ಕಾರದ ನಡುವೆ ಉದ್ವಿಗ್ನತೆಗಳು ಕಾಣಿಸಿಕೊಂಡವು, ಇದು ಭಾರತ ಸರ್ಕಾರದ ವಿರುದ್ಧ ಅನೇಕ ಸಿಖ್ಖರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : Global Warming: ಜೂನ್ 2023 ಭೂಮಿ ಕಂಡ ಅತ್ಯಧಿಕ ಬಿಸಿಯಾದ ತಿಂಗಳು