ಕರ್ನಾಟಕ

karnataka

By

Published : Jan 9, 2023, 2:19 PM IST

ETV Bharat / international

ಭಾರತೀಯ ಸಂಜಾತೆ ಸಿಖ್​ ಮಹಿಳೆ ಅಮೆರಿಕ ಕೋರ್ಟ್​ ಜಡ್ಜ್! ಇದೇ ಮೊದಲು

ಅಮೆರಿಕದಲ್ಲಿ ಭಾರತೀಯ ಮೂಲದವರ ಪಾರಮ್ಯ ಮುಂದುವರಿದಿದೆ. ಈಚೆಗಷ್ಟೇ ಟೆಕ್ಸಾಸ್​ ಕೋರ್ಟ್​ ಜಡ್ಜ್​ ಆಗಿ ಕೇರಳದ ವ್ಯಕ್ತಿ ಆಯ್ಕೆಯಾಗಿದ್ದರೆ, ಇದೀಗ ಸಿಖ್​ ಸಮುದಾಯದ ಮಹಿಳೆ ಮನ್‌ಪ್ರೀತ್ ಮೋನಿಕಾ ಸಿಂಗ್ ಹ್ಯಾರಿಸ್ ಕೌಂಟಿ ಕೋರ್ಟ್​ಗೆ ನ್ಯಾಯಾಧೀಶರಾಗಿದ್ದಾರೆ.

us-female-sikh-judge
ಭಾರತೀಯ ಸಂಜಾತೆ ಸಿಖ್​ ಮಹಿಳೆ ಅಮೆರಿಕ ಕೋರ್ಟ್​ ಜಡ್ಜ್

ಟೆಕ್ಸಾಸ್(ಅಮೆರಿಕ):ಅಮೆರಿಕದಲ್ಲಿ ಭಾರತೀಯ ಮೂಲದ ನ್ಯಾಯಾಧೀಶರ ಆಯ್ಕೆ ಹೆಚ್ಚಾಗಿದೆ. ಬಾಲ್ಯದಲ್ಲಿ ವಿದ್ಯಾಭ್ಯಾಸ ತೊರೆದು ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ ಕೇರಳದ ಕಾಸರಗೋಡಿನ ವ್ಯಕ್ತಿ ಟೆಕ್ಸಾಸ್ ಕೋರ್ಟ್​ ನ್ಯಾಯಾಧೀಶರಾದ ಬೆನ್ನಲ್ಲೇ, ಹ್ಯಾರಿಸ್ ಕೌಂಟಿ ಕೋರ್ಟ್​ಗೆ ಭಾರತೀಯ ಮೂಲದ, ಸಿಖ್​ ಸಮುದಾಯದ ಮಹಿಳೆ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅಮೆರಿಕದ ಮೊದಲ ಮಹಿಳಾ ಸಿಖ್​ ಜಡ್ಜ್​​ ಎಂಬ ದಾಖಲೆ ಬರೆದರು.

ಭಾರತೀಯ ಮೂಲದ ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ಹ್ಯಾರಿಸ್ ಕೌಂಟಿ ಕೋರ್ಟ್​ಗೆ ನ್ಯಾಯಾಧೀಶರಾದವರು. ಮೋನಿಕಾ ಸಿಂಗ್ ಅವರು ಭಾರತೀಯ ಸಂಜಾತೆಯಾದರೂ ಹುಟ್ಟಿ ಬೆಳೆದಿದ್ದೆಲ್ಲಾ ಹೂಸ್ಟನ್‌ ನಗರದಲ್ಲಿ. ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿದ್ದಾರೆ. 20 ವರ್ಷಗಳಿಂದ ವಕೀಲರಾಗಿರುವ ಮೋನಿಕಾ ಅವರು ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅನೇಕ ನಾಗರಿಕ ಹಕ್ಕುಗಳ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮನ್​ಪ್ರೀತ್​ ಅವರು, 'ನಾನಿದನ್ನು ಸಾಧಿಸಿದ್ದೇನೆ. ಹ್ಯಾರಿಸ್ ಕೌಂಟಿಯ ಜನರ ಪ್ರತಿನಿಧಿಯಾಗಿ ಸಿಖ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರತಿನಿಧಿಸುವುದು ನಿಜವಾದ ಗೌರವವಾಗಿದೆ. ಐತಿಹಾಸಿಕ ಕ್ಷಣವನ್ನಾಗಿ ಮಾಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇದೊಂದು ಅಸಾಮಾನ್ಯ ಘಟನೆಯಾಗಿದೆ. ಅಸಂಖ್ಯಾತ ಸಿಖ್ ಜನರು ಮತ್ತು ಇತರ ಅಲ್ಪಸಂಖ್ಯಾತರನ್ನು ಒಳಗೊಂಡ ನ್ಯಾಯಾಂಗ ಇದಾಗಿದ್ದು, ನನ್ನ 2 ದಶಕಗಳ ಅನುಭವವನ್ನು ಬಳಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಮನ್‌ಪ್ರೀತ್ ಮೋನಿಕಾ ಸಿಂಗ್ ಹ್ಯಾರಿಸ್ ಕೌಂಟಿ ಕೋರ್ಟ್​ಗೆ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದಕ್ಷಿಣ ಏಷ್ಯಾದ ನ್ಯಾಯಾಧೀಶರಾದ ಭಾರತೀಯ- ಅಮೆರಿಕನ್​ ಮೂಲದ ರವಿ ಸ್ಯಾಂಡಿಲ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ರವಿ ಸ್ಯಾಂಡಿಲ್​, ಸಿಖ್ ಸಮುದಾಯಕ್ಕೆ ಇದು ನಿಜವಾಗಿಯೂ ದೊಡ್ಡ ಕ್ಷಣವಾಗಿದೆ. ಮನ್​ಪ್ರೀತ್​ ಅವರು ಸಿಖ್​ ಸಮುದಾಯಕ್ಕೆ ಮಾತ್ರವಲ್ಲದೆ, ಎಲ್ಲರ ಪ್ರತಿನಿಧಿಯಾಗಿದ್ದಾರೆ ಎಂದು ಹೇಳಿದರು. ಸಿಖ್ ವಿಶ್ವದ ಐದನೇ ಅತಿ ದೊಡ್ಡ ಧರ್ಮವಾಗಿದೆ. ಅಮೆರಿಕದಲ್ಲಿ ಅಂದಾಜು 5 ಲಕ್ಷ ಸಿಖ್ಖರಿದ್ದಾರೆ. ಅದರಲ್ಲಿ 20 ಸಾವಿರ ಮಂದಿ ಹೂಸ್ಟನ್ ಪ್ರದೇಶದಲ್ಲಿ ನೆಲೆಸಿದ್ದಾರೆ.

ಕಾಸರಗೋಡಿನ ವ್ಯಕ್ತಿ ಅಮೆರಿಕ ಜಡ್ಜ್​:ಇನ್ನು ಮೊನ್ನೆಯಷ್ಟೇ ಕೇರಳದ ಕಾಸರಗೋಡಿನ ಸುರೇಂದ್ರನ್​ ಕೆ.ಪಟ್ಟೀಲ್​ ಅವರು ಟೆಕ್ಸಾಸ್​ ಕೋರ್ಟ್​ನ ಜಡ್ಜ್​ ಆಗಿ ಆಯ್ಕೆಯಾಗಿದ್ದರು. ಸುರೇಂದ್ರನ್​ ಅವರು ಬಾಲ್ಯದಲ್ಲಿ ಆರ್ಥಿಕ ಕಷ್ಟದಿಂದಾಗಿ ಶಾಲೆ ತೊರೆದಿದ್ದರು. ಜೀವನ ನಿರ್ವಹಣೆಗಾಗಿ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದರು. ಕಡುಬಡತನದಲ್ಲೇ ಬೆಳೆದ ಸುರೇಂದ್ರನ್​ ಹೌಸ್​ ಕೀಪಿಂಗ್​, ಬೀಡಿ ಕಟ್ಟುವ ದಿನಗೂಲಿ ಕೆಲಸ ಮಾಡಿದರು.

ಬಳಿಕ ತಮ್ಮ ಗ್ರಾಮಸ್ಥರಿಂದ ಆರ್ಥಿಕ ನೆರವು ಪಡೆದುಕೊಂಡು ಎಲ್​ಎಲ್​ಬಿ ಶಿಕ್ಷಣ ಪೂರೈಸಿದರು. ಇದಾದ ನಂತರ ಜೀವನ ಕಟ್ಟಿಕೊಳ್ಳಲು ಅಮೆರಿಕಕ್ಕೆ ತೆರಳಿದ್ದರು. ಅಲ್ಲೂ ಕೂಡ ಹಲವಾರು ವಿರೋಧಗಳನ್ನು ಎದುರಿಸಿ ಈಗ ಅಲ್ಲಿಯ ಕೋರ್ಟ್​ಗೆ ನ್ಯಾಯಾಧೀಶರಾಗಿದ್ದಾರೆ. 'ಈ ಹಾದಿ ಕಠಿಣವಾಗಿತ್ತು. ಇಂಗ್ಲಿಷ್​​ ಭಾಷಾ ಉಚ್ಚಾರಣೆಗೂ ನಾನು ಅವಮಾನಕ್ಕೀಡಾಗಿದ್ದೇನೆ. ಇದೆಲ್ಲವನ್ನೂ ಮೀರಿ ನಾನಿಂದು ಜಡ್ಜ್​​ ಆಗಿದ್ದೇನೆ' ಎಂದು ಸುರೇಂದ್ರನ್​ ಹೇಳಿಕೊಂಡಿದ್ದರು.

ಇದನ್ನೂ ಓದಿ:ವಿಮಾನದಲ್ಲಿ ಕುಡುಕರ ಹಾವಳಿ: ಗಗನಸಖಿಗೆ ಕಿರುಕುಳ, ಕ್ಯಾಪ್ಟನ್‌ ಮೇಲೆ ಹಲ್ಲೆ

ABOUT THE AUTHOR

...view details