ಸಿಂಗಾಪುರ: ಮಲೇಷ್ಯಾದಿಂದ ಸಿಂಗಾಪುರಕ್ಕೆ ಲಾಂಡ್ರಿ ಬ್ಯಾಗ್‌ಗಳಲ್ಲಿ 26 ನಾಯಿ ಮರಿಗಳು ಮತ್ತು ಬೆಕ್ಕನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ 36 ವರ್ಷದ ಭಾರತೀಯ ಮೂಲದ ಮಲೇಷಿಯಾದ ವ್ಯಕ್ತಿಗೆ 12 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಗೋಬಿಸುವರನ್ ಪರಮನ್ ಶಿವನ್ ಶಿಕ್ಷೆಗೊಳಗಾದ ಅಪರಾಧಿ.
ಈ ಪ್ರಕರಣವನ್ನು " ಪ್ರಾಣಿಗಳ ಕಳ್ಳಸಾಗಣೆಯ ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಒಂದಾಗಿದೆ" ಎಂದು ವಿವರಿಸಿದ ರಾಷ್ಟ್ರೀಯ ಉದ್ಯಾನವನಗಳ ಮಂಡಳಿ (ಎನ್‌ಪಾರ್ಕ್ಸ್) ಆರಂಭದಲ್ಲಿ ಒಂದು ನಾಯಿ ಮರಿ ಸತ್ತಿರುವುದು ಕಂಡು ಬಂದಿದ್ದರಿಂದ ಈ ಪ್ರಕರಣ ಬಯಲಿಗೆ ಬಂದಿದೆ. ಒಂದು ಶ್ವಾನ ಮೃತಪಟ್ಟ ನಂತರ 18 ನಾಯಿ ಮರಿಗಳು ಪಾರ್ವೊವೈರಸ್ ಸೋಂಕಿನಿಂದ ಸಾವನ್ನಪ್ಪಿದೆ ಎಂದು ಎನ್‌ಪಾರ್ಕ್ಸ್ ಹೇಳಿದೆ.
ಪರವಾನಗಿ ಇಲ್ಲದೆ ಸಾಕು ಪ್ರಾಣಿಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡಿದ್ದಕ್ಕಾಗಿ ಮತ್ತು ಈ ಪ್ರಕ್ರಿಯೆಯಲ್ಲಿ ಪ್ರಾಣಿಗಳಿಗೆ ಅನಗತ್ಯ ತೊಂದರೆ ಉಂಟು ಮಾಡಿದ ಆರೋಪದಲ್ಲಿ ಗೋಬಿಸುವರನ್ ಪರಮನ್ ಶಿವನ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರು ಅಕ್ಟೋಬರ್ 18, 2022 ರಂದು ಮಲೇಷ್ಯಾದಿಂದ ಲಾರಿಯಲ್ಲಿ 26 ನಾಯಿಮರಿಗಳು ಮತ್ತು ಒಂದು ಬೆಕ್ಕನ್ನು ಕಳ್ಳಸಾಗಣೆ ಮಾಡಿದ್ದರು.
ದಕ್ಷಿಣ ಪೆನಿನ್ಸುಲರ್ ಮಲೇಷ್ಯಾದೊಂದಿಗೆ ಸೇತುವೆಯ ಸಂಪರ್ಕದ ಸಿಂಗಾಪುರದ ಬದಿಯಲ್ಲಿರುವ ತುವಾಸ್ ಚೆಕ್‌ಪಾಯಿಂಟ್‌ನಲ್ಲಿನ ವಲಸೆ ಅಧಿಕಾರಿಗಳು ಮಲೇಷ್ಯಾ ನೋಂದಾಯಿತ ಲಾರಿಯನ್ನು ನಿಲ್ಲಿಸಿದರು ಮತ್ತು ಲಾರಿಯ ವಿವಿಧ ವಿಭಾಗಗಳಲ್ಲಿ 27 ಸಾಕುಪ್ರಾಣಿಗಳನ್ನು ಪತ್ತೆಮಾಡಲಾಗಿತ್ತು ಎಂದು ರಾಷ್ಟ್ರೀಯ ಉದ್ಯಾನವನಗಳ ಮಂಡಳಿ(ಎನ್‌ಪಾರ್ಕ್ಸ್) ತಿಳಿಸಿದೆ. ಕೆಲವು ಪ್ರಾಣಿಗಳನ್ನು ಲಾಂಡ್ರಿ ಬ್ಯಾಗ್‌ಗಳಲ್ಲಿ ಇರಿಸಿದ್ದರೆ, ಮತ್ತೆ ಕೆಲವನ್ನು ವಾಹನದ ಓವರ್‌ಹೆಡ್ ಕಂಪಾರ್ಟ್‌ಮೆಂಟ್‌ನಲ್ಲಿ ಇರಿಸಿದ್ದರು ಎಂದು ತಿಳಿಸಿದೆ.