ನ್ಯೂಯಾರ್ಕ್ (ಅಮೆರಿಕ):ನ್ಯೂ ಜೆರ್ಸಿಯಲ್ಲಿ ಭಾರತದ ಉತ್ತರ ಪ್ರದೇಶ ಮೂಲದ ದಂಪತಿ ಹಾಗೂ ಅವರ ಇಬ್ಬರು ಮಕ್ಕಳ ಮೃತದೇಹ ದೊರೆತಿದೆ. ಇವರ ವಾಸದ ಮನೆಯಲ್ಲೇ ನಾಲ್ವರ ಶವಗಳಿದ್ದವು. ಕೊಲೆ ಹಾಗೂ ಆತ್ಮಹತ್ಯೆ ಶಂಕೆಯ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತೇಜ್ ಪ್ರತಾಪ್ ಸಿಂಗ್ (43), ಸೋನಾಲ್ ಪರಿಹಾರ್ (42), 10 ವರ್ಷದ ಮಗ ಹಾಗೂ 6 ವರ್ಷದ ಮಗಳು ಮೃತರೆಂದು ಗುರುತಿಸಲಾಗಿದೆ. ಬುಧವಾರ ಸಂಜೆ 4:30ರ ಸುಮಾರಿಗೆ ಇಲ್ಲಿನ ಪ್ಲಾನ್ಸ್‌ಬರೋ ಮನೆಯಲ್ಲಿ ಎಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ. ಈ ಕುರಿತು ದೂರವಾಣಿ ಕರೆ ಮೂಲಕ ಸಿಕ್ಕ ಮಾಹಿತಿ ಆಧಾರದ ಮೇಲೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಶುಕ್ರವಾರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಮಿಡ್ಲ್‌ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಯೋಲಾಂಡಾ ಸಿಕ್ಕೋನ್ ಮತ್ತು ಪ್ಲಾನ್ಸ್‌ಬರೋ ಪೊಲೀಸ್ ಇಲಾಖೆಯ ಮುಖ್ಯಸ್ಥ ಎಮಾನ್ ಬ್ಲಾಂಚಾರ್ಡ್ ಜಂಟಿ ಹೇಳಿಕೆಯಲ್ಲಿ ತಿಳಿಸಿದರು.
ಸಂಬಂಧಿಯೊಬ್ಬರು ಯೋಗಕ್ಷೇಮ ವಿಚಾರಣೆಗೆಂದು ಮನೆಗೆ ಬಂದಾಗ ಮೃತದೇಹಗಳು ಪತ್ತೆಯಾಗಿವೆ. ಪ್ರಕರಣವನ್ನು ಕೊಲೆ ಮತ್ತು ಆತ್ಮಹತ್ಯೆ ಎಂಬ ಶಂಕೆಯಡಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಈ ಪ್ರದೇಶದಲ್ಲಿ ನಡೆದ ಹೆಚ್ಚುವರಿ ಮಾಹಿತಿ ಅಥವಾ ಸಿಸಿಟಿವಿ ದೃಶ್ಯಗಳು ಹೊಂದಿದ್ದರೆ, ಅದನ್ನು ಸ್ಥಳೀಯರು ಪ್ಲಾನ್ಸ್‌ಬರೋ ಪೊಲೀಸ್ ಇಲಾಖೆಗೆ ನೀಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಲ್ವರ ಸಾವಿನ ಬಗ್ಗೆ ಸಂತಾಪ ಸೂಚಿಸಿರುವ ಸ್ಥಳೀಯ ಮೇಯರ್ ಪೀಟರ್ ಕ್ಯಾಂಟು, ''ಘಟನೆಯಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ'' ಎಂದಿದ್ದಾರೆ.