ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣದ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ನಡುವೆ, ಭಾರತೀಯ ನಾಗರಿಕ ಸೇವೆಗಳ ಅಧಿಕಾರಿಯೊಬ್ಬರು ಭಾರತದ ಬಗೆಗಿನ ರಾಹುಲ್ ವಿಚಾರಧಾರೆಯನ್ನು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಅಧಿಕಾರಿ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ರೈಲ್ವೇ ಟ್ರಾಫಿಕ್ ಸೇವೆಗಳ ಅಧಿಕಾರಿಯಾಗಿರುವ ಇವರು, ಪಬ್ಲಿಕ್ ಪೋಲಿಸ್ ಬಗ್ಗೆ ಕೇಂಬ್ರಿಡ್ಜ್ ವಿವಿಯಲ್ಲಿ ಕಾಮನ್‌ವೆಲ್ತ್ ಸ್ಕಾಲರ್ ಕೂಡಾ ಆಗಿದ್ದಾರೆ.
'ನೀವು ಭಾರತದ ಸಂವಿಧಾನದ 1ನೇ ಪರಿಚ್ಛೇದವನ್ನು ಉಲ್ಲೇಖಿಸಿ, ಭಾರತವು ದೇಶವಲ್ಲ, ರಾಜ್ಯಗಳ ಒಕ್ಕೂಟ ಎಂದಿದ್ದೀರಿ. ಆದ್ರೆ ಅದೇ ನೀವು ಸಂವಿಧಾನದ ಹಿಂದಿನ ಪುಟಗಳನ್ನು ತಿರುವಿದರೆ, ಮಹತ್ವದ ಭಾಗವಾಗಿರುವ ಪೀಠಿಕೆಯಲ್ಲಿ ಭಾರತವು ಒಂದು ದೇಶವೆಂದೇ ಸ್ಪಷ್ಟವಾದ ಉಲ್ಲೇಖವಿರುವುದನ್ನು ಗಮನಿಸುವಿರಿ. ಭಾರತವು ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದು. ಇಷ್ಟಕ್ಕೂ 'ರಾಷ್ಟ್ರ' ಎಂಬ ಪರಿಕಲ್ಪನೆ ಅತ್ಯಂತ ಪುರಾತನವಾದ ವೇದಗಳಲ್ಲೂ ಇದೆ. ಹಾಗಾಗಿ ನಾವು ಅತ್ಯಂತ ಹಳೆಯ ನಾಗರಿಕತೆಯನ್ನು ಹೊಂದಿದ್ದೇವೆ. ಅಷ್ಟು ಮಾತ್ರವಲ್ಲ, ಇತಿಹಾಸಪ್ರಸಿದ್ಧ ತಕ್ಷಶಿಲಾ ವಿವಿಯಲ್ಲಿ ಆಚಾರ್ಯ ಚಾಣಕ್ಯ ಒಮ್ಮೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ, 'ನೀವು ಬೇರೆ ಬೇರೆ ಜನಪದಗಳಿಗೆ ಸೇರಿರಬಹುದು, ಆದ್ರೆ ಅಂತಿಮವಾಗಿ ಭಾರತವೆಂಬ ರಾಷ್ಟ್ರಕ್ಕೆ ಸೇರಿರುವಿರಿ' ಎಂದು ಹೇಳಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾದ ಸತ್ಯ' ಎಂದು ರಾಹುಲ್ ಸಮ್ಮುಖದಲ್ಲಿ ಈ ಅಧಿಕಾರಿ ವಿವರಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಪ್ರಶ್ನಿಸಿದ ರಾಹುಲ್ ಗಾಂಧಿ, ಅವರು ಅಲ್ಲಿ ರಾಷ್ಟ್ರ ಎಂಬ ಪದ ಬಳಸಿದ್ದರೇ? ಎಂದರು. ಮುಂದುವರಿದು, ರಾಷ್ಟ್ರ ಅನ್ನೋದು 'ರಾಜನ ಆಡಳಿತ' ಎಂದು ಹೇಳಿದರು. ತಕ್ಷಣ ಪ್ರತಿಕ್ರಿಯಿಸಿದ ಅಧಿಕಾರಿ, ಅಲ್ಲ, ಸಂಸ್ಕೃತದಲ್ಲಿ 'ರಾಷ್ಟ್ರ' ಎಂದರೆ 'ದೇಶ' ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ರಾಹುಲ್, ರಾಷ್ಟ್ರ ಅನ್ನೋದು 'ಪಶ್ಚಿಮದ ಪರಿಕಲ್ಪನೆ' ಎಂದರು.
ಇದಕ್ಕೆ ವಿವರವಾದ ಉತ್ತರ ನೀಡಲು ಪ್ರಯತ್ನಿಸಿದ ಅಧಿಕಾರಿ, 'ನಾನು ರಾಷ್ಟ್ರದ ಬಗ್ಗೆ ಮಾತನಾಡುವಾಗ ಅದನ್ನು ರಾಜಕೀಯವಾಗಿ ತೆಗೆದುಕೊಂಡಿಲ್ಲ, ಏಕೆಂದರೆ, ಇದಕ್ಕೆ ಸಂಬಂಧಿಸಿದಂತೆ ನಾವು ಸಾಕಷ್ಟು ಪ್ರಯೋಗಗಳನ್ನು ಜಗತ್ತಿನಲ್ಲಿ ನೋಡಿದ್ದೇವೆ. ಒಂದು ರಾಷ್ಟ್ರವು ಅತ್ಯಂತ ಗಟ್ಟಿಯಾದ ಸಾಮಾಜಿಕ, ಸಾಂಸ್ಕೃತಿಕ ಬಂಧವನ್ನು ಹೊಂದಿರದ ಹೊರತು, ಒಂದು ಸಂವಿಧಾನವೇ ದೇಶವನ್ನು ರಚಿಸಲು ಸಾಧ್ಯವಿಲ್ಲ.