ಟೆಲ್ ಅವೀವ್ (ಇಸ್ರೇಲ್): ಪ್ಯಾಲೆಸ್ಟೀನ್ ಮತ್ತು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಶನಿವಾರ ಆಯಾ ದೇಶಗಳಲ್ಲಿನ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ತುರ್ತು ಸಂದರ್ಭದಲ್ಲಿ ಕಚೇರಿಯನ್ನು ನೇರವಾಗಿ ಸಂಪರ್ಕಿಸುವಂತೆ ತಿಳಿಸಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರಗಾಮಿ ಗುಂಪು ಮತ್ತು ಇಸ್ರೇಲ್ ನಡುವೆ ಯುದ್ಧ ಭುಗಿಲೆದ್ದಿದ್ದು, ಎರಡೂ ಕಡೆಯಿಂದ ಕನಿಷ್ಠ 498 ಜನರು ಸಾವಿಗೀಡಾಗಿದ್ದಾರೆ.
ಇಸ್ರೇಲ್ ಮಿಲಿಟರಿ ನೀಡಿದ ಮಾಹಿತಿ ಪ್ರಕಾರ, ಹಮಾಸ್ ಉಗ್ರಗಾಮಿಗಳು ಶನಿವಾರ ಗಾಜಾ ಪಟ್ಟಿಯಿಂದ ಇಸ್ರೇಲ್‌ಗೆ 2,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಉಡಾವಣೆ ಮಾಡಿದ್ದಾರೆ. ಇದಾದ ಬಳಿಕ ಇಸ್ರೇಲ್ ಯುದ್ಧ ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. ಇನ್ನೊಂದೆಡೆ, ಗಡಿ ಬಳಿ ಹಲವಾರು ಇಸ್ರೇಲಿ ಸೈನಿಕರನ್ನು ವಶಪಡಿಸಿಕೊಂಡಿರುವುದಾಗಿ ಹಮಾಸ್ ಹೇಳುತ್ತಿದೆ.
ಹಠಾತ್ ದಾಳಿಯಲ್ಲಿ ಇಸ್ರೇಲ್‌ನಲ್ಲಿ 200 ಜನರು ಸಾವನ್ನಪ್ಪಿದ್ದಾರೆ ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಜಾ ಪಟ್ಟಿಯ ಭಾಗದಲ್ಲಿ ಇಸ್ರೇಲ್ ನಡೆಸಿದ ಪ್ರತಿದಾಳಿಗೆ 198 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 1,500 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್‌ನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಪಾಲಿಸುವಂತೆ ವಿನಂತಿಸಲಾಗಿದೆ. ಅನಗತ್ಯ ಓಡಾಟವನ್ನು ತಪ್ಪಿಸಿ, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ಸಲಹೆ ನೀಡಿದೆ. ಹಾಗೆಯೇ, ತುರ್ತು ಸಂದರ್ಭದಲ್ಲಿ ಕರೆ ಮಾಡಿ ಮಾಹಿತಿ ನೀಡಲು ಫೋನ್ ಸಂಖ್ಯೆಗಳನ್ನು ನೀಡಿದ್ದು, ಇಸ್ರೇಲ್ ಹೋಮ್ ಫ್ರಂಟ್ ಕಮಾಂಡ್ ಮತ್ತು ಸನ್ನದ್ಧತೆಯ ಕರಪತ್ರಗಳಿಗೆ ಯುಆರ್ಎಲ್ಗಳನ್ನು ಸಹ ಒದಗಿಸಿದೆ. ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸಲಹೆಯನ್ನು ನೀಡಲಾಗಿದೆ.