ಲಂಡನ್:ಅದು 1947, ಆಗಸ್ಟ್ 14ರ ಮಧ್ಯರಾತ್ರಿ. 2 ದಶಕಗಳ ಕಾಲ ಅಖಂಡ ಭಾರತವನ್ನಾಳಿದ ಬ್ರಿಟಿಷ್ ಆಡಳಿತ ದೇಶಕ್ಕೆ ಸ್ವಾತಂತ್ರ್ಯ ಘೋಷಿಸಿತು. ಆದರೆ, ಅದಕ್ಕೂ ಮೊದಲು ಕುತಂತ್ರಿ ಬಿಳಿಯರು ಅವಿಚ್ಛಿನ್ನ ದೇಶವನ್ನು ಭಿನ್ನ ಮಾಡಿ 'ಪಾಕಿಸ್ತಾನ'ವನ್ನು ಸೃಷ್ಟಿಸಿದರು. ಅಂದಿನ ಭಯಾನಕ ವಿದ್ಯಮಾನ ಇತಿಹಾಸದ ಪುಟಗಳಲ್ಲಿ ಎಂದೂ ಅಳಿಯದ ದುರಂತ ಘಟನೆ.
ಇಂದು ನಾವು ಸ್ವಾತಂತ್ರ್ಯೋತ್ಸವದ 77ನೇ ಆಚರಣೆಯಲ್ಲಿದ್ದೇವೆ. 1947 ರ ಭಾರತದ ವಿಭಜನೆಯ ಕಹಿ ಘಟನೆಯ ವಿದ್ಯಮಾನಗಳನ್ನು ಇಂಗ್ಲೆಂಡ್ನಲ್ಲಿರುವ ಭಾರತ ಹೈಕಮಿಷನರ್ ಕಚೇರಿ ಛಾಯಾಚಿತ್ರ ಪ್ರದರ್ಶನ ಮೂಲಕ ತೆರೆದಿಟ್ಟಿತು. ವಿಭಜನೆಯ ವೇಳೆ ಜನರ ಗುಳೆ, ಕಷ್ಟ ಕಾರ್ಪಣ್ಯಗಳು, ತ್ಯಾಗವನ್ನು ಸ್ಮರಿಸಲಾಯಿತು. ಭಾರತೀಯ ಸಮುದಾಯದ ಜನರು ಸೇರಿದ ಸಭೆಯಲ್ಲಿ ಅಂದು ನಡೆದ ವಿದ್ಯಮಾನಗಳನ್ನು ನೆನಪಿಸಿಕೊಂಡರು. 77ನೇ ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನದ ಮೊದಲು ದೇಶ ವಿಭಜನೆಗೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಸ್ವಂತಂತ್ರ ದುಃಖ ಮತ್ತು ಸಂತಸದ ಮಿಶ್ರ ಭಾವ:ಇದೇ ವೇಳೆ ಮಾತನಾಡಿದ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ, ಸ್ವಾತಂತ್ರ್ಯ ಸಂಭ್ರಮದಲ್ಲಿರುವ ನಾವು ದುಃಖ ಮತ್ತು ಸಂತಸದ ಮಿಶ್ರ ಭಾವದಲ್ಲಿದ್ದೇವೆ. ಕಾರಣ ಸ್ವತಂತ್ರ ನಮಗೆ ಹಲವರ ತ್ಯಾಗ, ಬಲಿದಾನಗಳಿಂದ ಬಂದಿದೆ. ದೇಶ ವಿಭಜನೆ ಎಂಬ ದೇಹವನ್ನೇ ಸೀಳಿದ ಕಹಿ ಸತ್ಯದ ಮೇಲೆ ಸಂಭ್ರಮಿಸಬೇಕಿದೆ ಎಂದು ಹೇಳಿದರು.
ಜನರು ಅಂದು ಮಾಡದ ತಪ್ಪಿಗೆ ದೇಶವನ್ನು ತೊರೆಯಬೇಕಾಯಿತು. ಹುಟ್ಟಿದ ಊರು, ಮನೆ, ಜನರನ್ನು ಬಿಟ್ಟರು. ನಿರೀಕ್ಷಿಸದ ನೋವಿಗೆ ಭಾರಿ ಬೆಲೆ ತೆತ್ತು ಜನರು ಗಡಿ ದಾಟಬೇಕಾಯಿತು. ಭಾರತವು ನಿರಾಶ್ರಿತರಾಗಿ ಸ್ವಾತಂತ್ರ್ಯವನ್ನು ಆಚರಿಸಬೇಕಾಯಿತು. ಇದು ಮಾನವ ಇತಿಹಾಸದಲ್ಲಿ ಅತಿದೊಡ್ಡ ವಲಸೆ. ಅತ್ಯಂತ ದುರಂತ ಕಥೆಯಾಗಿದೆ ಎಂದು ಅವರು ನೋವು ವ್ಯಕ್ತಪಡಿಸಿದರು.