ಜೊಹಾನಸ್‌ಬರ್ಗ್: ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿಯ ಸಮೀಪ ಖಾಸಗಿ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡು ಭಾರತೀಯ ಗಣಿ ಉದ್ಯಮಿ ಹರ್ಪಾಲ್ ರಾಂಧವಾ ಮತ್ತು ಅವರ 22 ವರ್ಷದ ಪುತ್ರ ಸೇರಿದಂತೆ ಒಟ್ಟು ಆರು ಜನ ಮೃತಪಟ್ಟಿರುವ ಘಟನೆ ಸೆ.29ರಂದು ನಡೆದಿದ್ದು, ಇಂದು ವರದಿಯಾಗಿದೆ. ಹರ್ಪಾಲ್ ರಾಂಧವಾ ಅವರು ಚಿನ್ನ, ಕಲ್ಲಿದ್ದಲು, ನಿಕ್ಕಲ್ ಹಾಗು ತಾಮ್ರದ ಗಣಿಗಾರಿಕೆನ್ನು ನಡೆಸುತ್ತಿದ್ದ ರಿಯೋಜಿಮ್ ಕಂಪನಿಯ ಮಾಲೀಕರು. ಇವರ ಮಗ ಅಮರ್ ಕಬೀರ್ ಸಿಂಗ್ ರಾಂಧವಾ ಮತ್ತು ಇತರ ನಾಲ್ವರು ನತದೃಷ್ಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಜಿಂಬಾಬ್ವೆಯ ಮಾಧ್ಯಮಗಳು ವರದಿ ಮಾಡಿವೆ.
ರಿಯೋಜಿಮ್ ಕಂಪನಿ ಒಡೆತನದ ಸೆಸ್ನಾ 206 ವಿಮಾನ ಹರಾರೆಯಿಂದ ಮುರೋವಾ ವಜ್ರದ ಗಣಿಗೆ ತೆರಳುತ್ತಿದ್ದಾಗ ಧರೆಗಪ್ಪಳಿಸಿದೆ. ಗಣಿಯ ಬಳಿ ಸಿಂಗಲ್ ಇಂಜಿನ್ ವಿಮಾನದ ಅವಶೇಷಗಳು ಸಿಕ್ಕಿವೆ. ಜ್ವಾಮಹಂಡೆ ಪ್ರದೇಶದ ಪೀಟರ್ ಫಾರ್ಮ್ ಪ್ರದೇಶದಲ್ಲಿ ಹಾರಾಟದ ವೇಳೆಯೇ ಸ್ಫೋಟಗೊಂಡಿದೆ. ಅವಘಡದಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತಪಟ್ಟವರಲ್ಲಿ ನಾಲ್ವರು ವಿದೇಶಿಯರು ಮತ್ತು ಇತರ ಇಬ್ಬರು ಜಿಂಬಾಬ್ವೆಯವರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ದಿನಪತ್ರಿಕೆ ದಿ ಹೆರಾಲ್ಡ್ ವರದಿ ಮಾಡಿದೆ. ಸೆಪ್ಟೆಂಬರ್ 29ರಂದು ಬೆಳಿಗ್ಗೆ 7.30 ರಿಂದ 8 ರ ನಡುವೆ ಅಪಘಾತ ಸಂಭವಿಸಿದೆ ಎಂದು ಜಿಂಬಾಬ್ವೆ ಪೊಲೀಸರು ತಿಳಿಸಿದ್ದಾರೆ.