ಒಟ್ಟಾವಾ (ಕೆನಡಾ):ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಮತ್ತು ಭಾರತ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಡುವ ಲಕ್ಷಣಗಳು ಗೋಚರಿಸಿವೆ. ಮಹತ್ವದ ಬೆಳವಣಿಗೆಯಲ್ಲಿ ಕೆನಡಾದಲ್ಲಿನ ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಕೆನಡಾ ಸರ್ಕಾರ ಉಚ್ಛಾಟನೆ ಮಾಡಿದೆ. ಈ ವಿಚಾರವನ್ನು ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿರುವುದಾಗಿ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮ ವರದಿ ಮಾಡಿದೆ. ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಅಲ್ ಜಜೀರಾ ಸುದ್ದಿ ಮಾಧ್ಯಮದ ಪ್ರಕಾರ, ಖಲಿಸ್ತಾನಿ ನಾಯಕನ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬ ಆರೋಪದ ಮೇರೆಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಕೆನಡಾ ಸರ್ಕಾರ ಉಚ್ಚಾಟಿಸಿದೆ ಎಂದು ಸಚಿವೆ ಜೋಲಿ ಹೇಳಿದ್ದಾರೆ. ಆದರೆ ಉಚ್ಚಾಟನೆಗೊಂಡ ರಾಜತಾಂತ್ರಿಕ ಅಧಿಕಾರಿಯ ಹೆಸರು ಮತ್ತು ಅವರು ಕಾರ್ಯನಿರ್ವಹಿಸುತ್ತಿದ್ದ ಸ್ಥಳದ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ.
"ದೇಶದ ಸಾರ್ವಭೌಮತ್ವದ ಉಲ್ಲಂಘನೆಯನ್ನು ನಾವು ಸಹಿಸಲ್ಲ. ಅದಕ್ಕಾಗಿಯೇ ನಾವು ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ್ದೇವೆ" ಎಂದು ಜೋಲಿ ಸುದ್ದಿಗೋಷ್ಠಿಯಲ್ಲಿ ಹೇಳಿರುವುದಾಗಿ ವರದಿ ಹೇಳಿದೆ.
ಇದಕ್ಕೂ ಮುನ್ನ, ಸೋಮವಾರ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹರ್ದೀಪ್ ಸಿಂಗ್ ನಿಜ್ಜರ್ ಗುಂಡಿನ ದಾಳಿಯ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿರುವುದಾಗಿ ಸಿಬಿಸಿ ನ್ಯೂಸ್ ವರದಿ ಮಾಡಿತ್ತು.
ಗುರುನಾನಕ್ ಸಿಖ್ ಗುರುದ್ವಾರದ ಅಧ್ಯಕ್ಷ, ಕೆನಡಾದಲ್ಲಿ ಸಿಖ್ ಫಾರ್ ಜಸ್ಟೀಸ್ ಎಂಬ ಸಂಘಟನೆ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥನಾಗಿ ಗುರುತಿಸಿಕೊಂಡಿದ್ದ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಬಳಿ ಇಬ್ಬರು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದೀಗ ಟ್ರೂಡೊ ಕೆನಡಾ ಪ್ರಜೆಯ ಹತ್ಯೆಯನ್ನು ಭಾರತ ಸರ್ಕಾರದ ಏಜೆಂಟರು ನಡೆಸಿದ್ದಾರೆ ಎಂಬುದಕ್ಕೆ ಕಾರಣಗಳಿವೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಕೆನಡಾ ಪ್ರಜೆಯ ಹತ್ಯೆಯಲ್ಲಿ ವಿದೇಶಿ ಕೈವಾಡ ಅಥವಾ ಸರ್ಕಾರದ ಶಾಮೀಲು ಸಹಿಸಲ್ಲ ಎಂದು ಅವರು ಹೇಳಿದ್ದಾರೆ. ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಕೈವಾಡ ಇರುವ ಸಾಧ್ಯತೆ ಬಗ್ಗೆ ಕೆನಡಾದ ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಭಾರತ ಸರ್ಕಾರದ ಏಜೆಂಟರುಗಳು ಖಲಿಸ್ತಾನಿ ನಾಯಕ ನಿಜ್ಜರ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ಭದ್ರತಾ ಸಂಸ್ಥೆಗಳು ನಂಬಲು ಹಲವು ಕಾರಣಗಳಿವೆ ಎಂದು ಟ್ರೂಡೊ ತಿಳಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ:'ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ನೋಡುವುದು ನನ್ನ ಕನಸು': ಸೋನಿಯಾ ಗಾಂಧಿ