ನ್ಯೂಯಾರ್ಕ್ (ಅಮೆರಿಕ) :ನಾಲ್ಕು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನ್ಯೂಯಾರ್ಕ್ಗೆ ತಲುಪಿದ್ದಾರೆ. ಈ ವೇಳೆ, ಭಾರತೀಯ ವಲಸಿಗರು ಪ್ರಧಾನಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಅದರಲ್ಲೂ ಭಾರತೀಯ ಸದಸ್ಯರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಮೋದಿ ಚಿತ್ರವಿರುವ ನೆಹರು ಜಾಕೆಟ್ ಧರಿಸಿ ವಿಶೇಷವಾಗಿ ಸ್ವಾಗತ ಮಾಡಿದರು.
ಮಿನೇಶ್ ಸಿ ಪಟೇಲ್ ಎಂಬುವರು ಮೋದಿ ಚಿತ್ರದಿಂದ ಕೂಡಿದ್ದ ನೆಹರು ಜಾಕೆಟ್ ಅನ್ನು ಧರಿಸಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಜಾಕೆಟ್ ಅನ್ನು 2015ರಲ್ಲಿ ಗುಜರಾತ್ ದಿನೋತ್ಸವದಂದು ತಯಾರಿಸಲಾಗಿದೆ. ಈ ರೀತಿಯ 26 ಜಾಕೆಟ್ಗಳನ್ನು ತಯಾರಿಸಲಾಗಿದ್ದು, ಅದರಲ್ಲಿ ನಾಲ್ಕು ಜಾಕೆಟ್ ಇಲ್ಲಿವೆ" ಎಂದು ಇದೇ ವೇಳೆ ತಿಳಿಸಿದರು.
ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮೊದಲ ದಿನ ಪ್ರವಾಸಕ್ಕಾಗಿ ನ್ಯೂಯಾರ್ಕ್ಗೆ ತರೆಳಿದ್ದು, ಅವರು ತಂಗಲಿರುವ ಹೋಟೆಲ್ ಲೊಟ್ಟೆಯಲ್ಲಿ ಭಾರತೀಯ ವಲಸಿಗರಿಂದ ಅದ್ದೂರಿಯಾಗಿ ಸ್ವಾಗತ ಪಡೆದರು. ಈ ವೇಳೆ "ಭಾರತ್ ಮಾತಾಕಿ ಜೈ" ಎಂಬ ಘೋಷಣೆಗಳು ಹೋಟೆಲ್‌ನಲ್ಲಿ ಪ್ರತಿಧ್ವನಿಸಿದವು.
ಪ್ರಧಾನ ಮಂತ್ರಿ ಅವರನ್ನು ನೋಡುತ್ತಿದ್ದಂತೆ ಭಾರತೀಯ ವಲಸಿಗರು ಹೆಮ್ಮೆಯಿಂದ ರಾಷ್ಟ್ರ ಧ್ವಜಗಳನ್ನು ಬೀಸಿದರು. ಅಲ್ಲದೇ ಪ್ರಧಾನಿ ಮೋದಿ ಅವರ ಭೇಟಿ ಮಾಡಲು ಮತ್ತು ಅವರೊಂದಿಗೆ ಸಂವಾದ ನಡೆಸಲು ನೆರದಿದ್ದ ಜನ ಉತ್ಸಾಹದಿಂದ ಕಾಯುತ್ತಿದ್ದರು. ಹೋಟೆಲ್‌ನಲ್ಲಿ ಬೋರಾ ಸಮುದಾಯದವರೊಂದಿಗೆ ಪ್ರಧಾನಿ ಮೋದಿ ಸಭೆಯನ್ನೂ ನಡೆಸಿದರು.
ಇದೇ ವೇಳೆ, ಅಮೆರಿಕದಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. "ಅಮೆರಿಕದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು, ನಾನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ" ಎಂದು ಹೇಳಿದ್ದಾರೆ.