ವಾಷಿಂಗ್ಟನ್ :ದಶಕಗಳಷ್ಟು ಹಳೆಯದಾದ ಗ್ರೀನ್ ಕಾರ್ಡ್ ಬ್ಯಾಕ್‌ಲಾಗ್ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಗ್ರೀನ್ ಕಾರ್ಡ್ ಬ್ಯಾಕ್‌ಲಾಗ್‌ನಿಂದ ಸಂಕಷ್ಟ ಎದುರಿಸುತ್ತಿರುವ ಭಾರತೀಯ ಮೂಲದ ಅಮೆರಿಕನ್ನರಿಗೆ ಉದ್ಯೋಗ ದೃಢೀಕರಣ ಪತ್ರ ನೀಡುವ ನಿಯಮಗಳನ್ನು ಸಡಿಲಿಸುವಂತೆ ಬೈಡನ್ ಆಡಳಿತಕ್ಕೆ ಯುಎಸ್ನಲ್ಲಿನ ಭಾರತೀಯ ವಲಸಿಗರ ಸಂಸ್ಥೆ ಒತ್ತಾಯಿಸಿದೆ.
ಸುಮಾರು 1.1 ಮಿಲಿಯನ್ ವೀಸಾ ಹೊಂದಿರುವ ಭಾರತೀಯ ಮೂಲದ ವಲಸಿಗರು ಗ್ರೀನ್ ಕಾರ್ಡ್‌ಗಾಗಿ I-485 ಅಡಿ ಅರ್ಜಿ ಸಲ್ಲಿಸಲು ದಿನಾಂಕಕ್ಕಾಗಿ ಕಾಯುತ್ತಿದ್ದಾರೆ. ಇದರ ನಡುವೆಯೇ ಫೌಂಡೇಶನ್ ಫಾರ್ ಇಂಡಿಯಾ ಅಂಡ್ ಇಂಡಿಯನ್ ಡಯಾಸ್ಪೊರಾ (FIIDS) ವರದಿಯೊಂದು ಬಿಡುಗಡೆ ಮಾಡಿದೆ. ಪ್ರತಿ ದೇಶದ ಜನರಿಗೆ ಗ್ರೀನ್ ಕಾರ್ಡ್ ನೀಡುವ ಮಿತಿ ಸೀಮಿತವಾಗಿದೆ.
ಯಾವುದೇ ದೇಶಕ್ಕೆ ಏಳು ಶೇಕಡಾಕ್ಕಿಂತ ಹೆಚ್ಚು ಗ್ರೀನ್ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ. ಈ ನಿಟ್ಟಿನಲ್ಲಿ ನೋಡುವುದಾದರೆ ಗ್ರೀನ್ ಕಾರ್ಡ್ ಪಡೆಯಲು ಅರ್ಜಿದಾರರು ಸುಮಾರು 135 ವರ್ಷಗಳ ಕಾಲ ಕಾಯಬೇಕಾಗುತ್ತದೆ. ಈ ಪೈಕಿ ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವವರಲ್ಲಿ 400,000ಕ್ಕೂ ಹೆಚ್ಚಿನ ಜನ ಗ್ರೀನ್ ಕಾರ್ಡ್ ಪಡೆಯುವ ಮೊದಲೇ ಸಾಯಬಹುದು ಎಂದು ಹೇಳಿದೆ.
ಗ್ರೀನ್ ಕಾರ್ಡ್ ಪ್ರಕ್ರಿಯೆಯ ಆರಂಭಿಕ ಹಂತಗಳಲ್ಲಿ ಉದ್ಯೋಗದ ದೃಢೀಕರಣ ಪತ್ರಗಳನ್ನು ನೀಡುವುದರಿಂದ ಭಾರತೀಯ ಮೂಲದ ಅಮೆರಿಕನ್ನರಿಗೆ ಮತ್ತು ಅವರ ಕುಟುಂಬದವರಿಗೆ ಹೆಚ್ಚಿನ ಸಹಾಯವಾಗಲಿದೆ ಎಂದು ವರದಿ ಹೇಳಿದೆ.