ವಾಷಿಂಗ್ಟನ್:ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷದ ಸದಸ್ಯೆ ನಬಿಲಾ ಸೈಯದ್ ಇತಿಹಾಸ ಸೃಷ್ಟಿಸಿದರು. ಇವರು ತಮ್ಮ 23 ನೇ ವಯಸ್ಸಿನಲ್ಲಿ ಇಲಿನಾಯ್ಸ್ ರಾಜ್ಯ ಶಾಸಕಾಂಗಕ್ಕೆ ಆಯ್ಕೆಯಾಗಿದ್ದಾರೆ.
ಮಧ್ಯಂತರ ಚುನಾವಣೆಯ ಭಾಗವಾಗಿ ನಬಿಲಾ ಸೈಯದ್ ಇಲಿನಾಯ್ಸ್‌ನ 51 ನೇ ಜಿಲ್ಲೆಯಿಂದ ಚುನಾಯಿತರಾಗಿದ್ದಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಕ್ರಿಸ್ ಬೋಸ್ ವಿರುದ್ಧ ಜಯಗಳಿಸಿದ ಇವರು, ಶೇ.52.3ರಷ್ಟು ಮತಗಳನ್ನು ಪಡೆದಿದ್ದಾರೆ.
ಟ್ವಿಟ್ಟರ್ನಲ್ಲಿ ಖುಷಿ ಹಂಚಿಕೊಂಡಿದ್ದು, ನನ್ನ ಹೆಸರು ನಬಿಲಾ ಸೈಯದ್. ನನಗೆ 23 ವರ್ಷ. ಇಂಡೋ-ಅಮೆರಿಕನ್ ಮುಸ್ಲಿಂ ಮಹಿಳೆ. ಉಪಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯ ವಿರುದ್ಧ ಗೆದ್ದಿದ್ದೇನೆ. ನಾನು ಇಲಿನಾಯ್ಸ್ ಜನರಲ್ ಅಸೆಂಬ್ಲಿಗೆ ಆಯ್ಕೆಯಾದ ಅತ್ಯಂತ ಕಿರಿಯ ಮಹಿಳೆ ಎಂದು ಪೋಸ್ಟ್ ಮಾಡಿದ್ದಾರೆ.
ನಾನು ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿದ ನಂತರ ಜನರೊಂದಿಗೆ ಹೆಚ್ಚಿನ ಸಮಯ ಕಳೆಯಲು ಮೀಸಲಿಟ್ಟಿದ್ದೆ. ಉತ್ತಮ ನಾಯಕತ್ವಕ್ಕಾಗಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಜನರಲ್ಲಿ ಮನವಿ ಮಾಡಿದ್ದೆ. ಜನರೊಂದಿಗೆ ಬೆರೆತಿದ್ದರಿಂದಲೇ ನನಗೆ ಯಶಸ್ಸು ಸಿಕ್ಕಿತು. ಚುನಾವಣೆಯಲ್ಲಿ ಗೆಲ್ಲಲು ಕ್ಷೇತ್ರದ ಎಲ್ಲರ ಮನೆ ಬಾಗಿಲು ತಟ್ಟಿದ್ದೇನೆ ಎನ್ನುತ್ತಾ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ:ಸಚಿವ ಸ್ಥಾನಕ್ಕೆ ಸ್ನೇಹಿತ ಗೇವಿನ್ ವಿಲಿಯಮ್ಸನ್ ರಾಜೀನಾಮೆ: ಒತ್ತಡದಲ್ಲಿ ಸಿಲುಕಿದರೇ ಸುನಕ್?