ವಿಶ್ವಸಂಸ್ಥೆ:ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಕರಡು ನಿರ್ಣಯದ ಪರವಾಗಿ ಭಾರತ ಮತ ಹಾಕಿದೆ.
ನಿರ್ಣಯದ ಪರ 153 ಮತಗಳ ಚಲಾವಣೆ:ಮಂಗಳವಾರ, 193 ಸದಸ್ಯರ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ತುರ್ತು ವಿಶೇಷ ಅಧಿವೇಶನದಲ್ಲಿ ಈಜಿಪ್ಟ್ ಪರಿಚಯಿಸಿದ ಕರಡು ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯದ ಪರವಾಗಿ 153 ಮತಗಳು ಬಿದ್ದಿವೆ. ಆದರೆ, 23 ರಾಷ್ಟ್ರಗಳು ಗೈರು ಹಾಜರಾದವು. 10 ದೇಶಗಳು ಕರಡು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ.
ಅಲ್ಜೀರಿಯಾ, ಬಹ್ರೇನ್, ಇರಾಕ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪ್ಯಾಲೆಸ್ಟೈನ್ ಪರವಾದ ನಿರ್ಣಯವು ಗಾಜಾದಲ್ಲಿ ತಕ್ಷಣದ ಮಾನವೀಯ ಕದನ ವಿರಾಮವನ್ನು ಒತ್ತಾಯಿಸಿದೆ. ಎಲ್ಲಾ ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ತಮ್ಮ ಬಾಧ್ಯತೆಗಳನ್ನು ಅನುಸರಿಸಬೇಕು, ವಿಶೇಷವಾಗಿ ನಾಗರಿಕರ ರಕ್ಷಣೆಗೆ ಸಂಬಂಧಿಸಿದಂತೆ ತನ್ನ ಬೇಡಿಕೆಯನ್ನು ಪುನರುಚ್ಚರಿಸಲಾಯಿತು. ಮಾನವೀಯ ದೃಷ್ಟಿಯಿಂದ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ.
ಈ ನಿರ್ಣಯದಲ್ಲಿ ಹಮಾಸ್ ಅನ್ನು ಹೆಸರಿಸಲಿಲ್ಲ, ಜೊತೆಗೆ ಅಮೆರಿಕ ಕರಡು ನಿರ್ಣಯಕ್ಕೆ ತಿದ್ದುಪಡಿ ಮಾಡುವಂತೆ ಪ್ರಸ್ತಾಪಿಸಿದೆ. 7 ಅಕ್ಟೋಬರ್ 2023 ರಂದು ಇಸ್ರೇಲ್‌ನಲ್ಲಿ ಹಮಾಸ್ ಕಡೆಯವರು ನಡೆಸಿದ ಭೀಕರ ದಾಳಿ ಮತ್ತು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿರುವ ಕ್ರಮವನ್ನು ಖಂಡಿಸುವ ನಿರ್ಣಯಕ್ಕೂ ಭಾರತ ಪರವಾಗಿ ಮತ ಚಲಾಯಿಸಿದೆ.