ನ್ಯೂಯಾರ್ಕ್ (ಅಮೆರಿಕ) :ಕಪ್ಪು ಸಮುದ್ರದ ಧಾನ್ಯ ಉಪಕ್ರಮವನ್ನು (Black Sea Grain Initiative) (ಕಪ್ಪು ಸಮುದ್ರದ ಮೂಲಕ ಬೇರೆ ದೇಶಗಳಿಗೆ ಆಹಾರ ಧಾನ್ಯಗಳ ಸಾಗಣೆ) ಮುಂದುವರೆಸುವಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾಡಿದ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಬೋಜ್, "ಕಪ್ಪು ಸಮುದ್ರದ ಧಾನ್ಯ ಉಪಕ್ರಮವನ್ನು ಮುಂದುವರಿಸುವಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಮತ್ತು ಪ್ರಸ್ತುತ ಬಿಕ್ಕಟ್ಟಿಗೆ ಶೀಘ್ರ ಪರಿಹಾರವನ್ನು ನಿರೀಕ್ಷಿಸುತ್ತದೆ" ಎಂದು ಹೇಳಿದರು. ಬಳಿಕ, ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನಕ್ಕಾಗಿ ಮತ್ತು ಈ ಪ್ರಮುಖ ವಿಷಯದ ಮೇಲೆ ಗಮನ ಕೇಂದ್ರೀಕರಿಸಿದ್ದಕ್ಕಾಗಿ ಅವರು ಅಮೆರಿಕವನ್ನು ಶ್ಲಾಘಿಸಿದರು.
"ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ನಮ್ಮ ಭವಿಷ್ಯವನ್ನು ನಿರ್ಮಿಸಲು ಶಾಂತಿ, ಸಹಕಾರ ಮತ್ತು ಬಹುಪಕ್ಷೀಯತೆಯನ್ನು ಆಯ್ಕೆ ಮಾಡುವುದು ಅವಶ್ಯಕ. ಜಾಗತಿಕ ವ್ಯವಸ್ಥೆಯನ್ನು ಕಾಪಾಡಲು ಅಂತಾರಾಷ್ಟ್ರೀಯ ವಾಸ್ತುಶಿಲ್ಪ ಮತ್ತು ಆಡಳಿತ ವ್ಯವಸ್ಥೆಗಳನ್ನು ಬಲಪಡಿಸಬೇಕು. ಆದ್ದರಿಂದ, ಜಾಗತಿಕ ಕಾನೂನು ಮತ್ತು ಮೌಲ್ಯಗಳು ಹಂಚಿಕೆಯ ಜವಾಬ್ದಾರಿಯಾಗಿರಬೇಕು" ಎಂದು ಕಾಂಬೋಜ್ ಸಲಹೆ ನೀಡಿದರು.
ಹೆಚ್ಚುತ್ತಿರುವ ಆಹಾರ ಧಾನ್ಯದ ಕೊರತೆಯನ್ನು ಪರಿಹರಿಸಲು ನಾವು ಪ್ರಸ್ತುತ ನಿರ್ಬಂಧಗಳನ್ನು ಮೀರಿ ಹೋಗಬೇಕಾಗಿದೆ. ಭಾರತವು ಸಮಕಾಲಿನ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಸಂಪೂರ್ಣವಾಗಿ ಬದ್ಧವಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತವು ಆಹಾರ ಭದ್ರತೆಯನ್ನು ಬಲಪಡಿಸಲು ತನ್ನ ನೆರೆಹೊರೆಯ ದೇಶಗಳು, ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಿಗೆ ಸಾವಿರಾರು ಮೆಟ್ರಿಕ್ ಟನ್ ಗೋಧಿ, ಅಕ್ಕಿ, ಬೇಳೆ ಕಾಳುಗಳ ರೂಪದಲ್ಲಿ ಆಹಾರದ ಸಹಾಯವನ್ನು ಹೇಗೆ ನೀಡಿತು ಎಂಬುದನ್ನು ನೆನಪಿಸಿಕೊಂಡರು.