ವಿಶ್ವಸಂಸ್ಥೆ: ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನ್ವರ್ ಉಲ್ ಹಕ್ ಕಾಕರ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಜಮ್ಮು ಮತ್ತು ಕಾಶ್ಮಿರ ವಿಷಯ ಪ್ರಸ್ತಾಪಿಸಿದ್ದಕ್ಕೆ ಭಾರತ ತಿರುಗೇಟು ನೀಡಿದೆ.
ಶುಕ್ರವಾರ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 78ನೇ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ಕಾಕರ್, 'ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಸ್ಥಾಪನೆಗೆ ಕಾಶ್ಮೀರ ವಿಷಯವೇ ನಿರ್ಣಾಯಕವಾದುದು" ಎಂದು ಪ್ರತಿಪಾದಿಸಿದರು. ಇದಕ್ಕೆ ವಿಶ್ವಸಂಸ್ಥೆಯಲ್ಲಿನ ಭಾರತದ ಕಾರ್ಯದರ್ಶಿ ಪೆಟಲ್ ಗೆಹಲೋತ್ ತಿರುಗೇಟು ನೀಡಿದ್ದಾರೆ. "ಪಾಕಿಸ್ತಾನ ಈ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಭಾರತದ ವಿರುದ್ಧ ಆಧಾರ ರಹಿತ ಮತ್ತು ದುರುದ್ದೇಶಪೂರಿತ ಪ್ರಚಾರ ಮಾಡುವ ತನ್ನ ಹಳೆಯ ಚಾಳಿ ಮುಂದುವರಿಸಿದೆ" ಎಂದರು.
"ವಿಶ್ವದಲ್ಲಿ ಅತಿ ಹೆಚ್ಚು ಅಂತರಾಷ್ಟ್ರೀಯವಾಗಿ ನಿಷೇಧಿತ ಭಯೋತ್ಪಾದಕ ತಾಣಗಳು ಮತ್ತು ವ್ಯಕ್ತಿಗಳಿಗೆ ಪಾಕಿಸ್ತಾನ ನೆಲೆಯಾಗಿದೆ. ತಾಂತ್ರಿಕ ಕುತಂತ್ರದಲ್ಲಿ ತೊಡಗುವ ಬದಲು ಮುಂಬೈ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಪಾಕಿಸ್ತಾನಕ್ಕೆ ಕರೆ ನೀಡುತ್ತೇವೆ. ಘಟನೆಯಲ್ಲಿ ಬಲಿಯಾದವರು ಕುಟುಂಬಗಳ ಸದಸ್ಯರು 15 ವರ್ಷಗಳ ನಂತರವೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ" ಎಂದು ಗೆಹಲೋತ್ ಕಟುವಾಗಿ ಪ್ರತಿಕ್ರಿಯಿಸಿದರು.
'ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸಬೇಕಾದರೆ ಪಾಕಿಸ್ತಾನ 3 ಕ್ರಮಗಳನ್ನು ಕೈಗೊಳ್ಳಬೇಕು.
- ಮೊದಲನೆಯದು, ಗಡಿಯಾಚೆಗಿನ ಉಗ್ರ ಚಟುವಟಿಕೆಗಳ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು. ಜತೆಗೆ ಭಯೋತ್ಪಾದಕರಿಗೆ ಮೂಲಸೌಕರ್ಯ ಕಲ್ಪಿಸುವುದನ್ನು ತಕ್ಷಣವೇ ನಿಲ್ಲಿಸಬೇಕು.
- ಎರಡನೆಯದಾಗಿ, ಅಕ್ರಮವಾಗಿ ಮತ್ತು ಒತ್ತಾಯ ಪೂರ್ವಕವಾಗಿ ಅತಿಕ್ರಮಣ ಮಾಡಿರುವ ಭಾರತದ ಭೂಪ್ರದೇಶದಿಂದ ಹೊರ ನಡೆಯಬೇಕು.
- ಮೂರನೇಯದು, ಪಾಕ್ನಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಕೊನೆಯಾಗಬೇಕು ಎಂದು ಆಗ್ರಹಿಸಿದರು.
ತನ್ನ ಹಿಂದಿನ ಭಾಷಣದಲ್ಲಿ ಕಾಕರ್, ಭಾರತ ಸೇರಿದಂತೆ ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಪಾಕಿಸ್ತಾನ ಶಾಂತಿಯುತ ಮತ್ತು ಉತ್ಪಾದಕ ಸಂಬಂಧಗಳನ್ನು ಬಯಸುತ್ತದೆ ಎಂದು ಹೇಳಿದರು. ಅಲ್ಲದೇ ಪಾಕಿಸ್ತಾನ ಮತ್ತು ಭಾರತ ನಡುವಿನ ಶಾಂತಿಗೆ ಕಾಶ್ಮೀರವೇ ಕೀಲಿಕೈ ಎಂದು ಅವರು ಪ್ರತಿಪಾದಿಸಿದರು.