ಮೆಲ್ಬೋರ್ನ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ, ಭಾರತ ವಿರೋಧ ಬರಹಗಳ ಪ್ರಕರಣಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಈ ತಿಂಗಳಾರಂಭದಲ್ಲಿ ಮೆಲ್ಬೋರ್ನ್‌ನ ಸ್ವಾಮಿನಾರಾಯಣ ದೇವಸ್ಥಾನ, ವಿಕ್ಟೋರಿಯಾಸ್ ಕ್ಯಾರಂ ಡೌನ್ಸ್‌ನಲ್ಲಿರುವ ಐತಿಹಾಸಿಕ ಶ್ರೀ ಶಿವ ವಿಷ್ಣು ದೇವಸ್ಥಾನ ಮತ್ತು ಮೆಲ್ಬೋರ್ನ್‌ನ ಇಸ್ಕಾನ್ ದೇವಸ್ಥಾನವನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ. ‘ಇದು ಅಪಾಯಕಾರಿ’ ಬೆಳವಣಿಗೆ ಎಂದು ಕ್ಯಾನ್‌ಬೆರಾದಲ್ಲಿರುವ ಭಾರತೀಯ ಹೈಕಮಿಷನ್ ಎಚ್ಚರಿಸಿದೆ.
"ಈ ಘಟನೆಗಳು ಶಾಂತಿಯುತ ಬಹುನಂಬಿಕೆ ಮತ್ತು ಬಹುಸಂಸ್ಕೃತಿಯ ಭಾರತೀಯ-ಆಸ್ಟ್ರೇಲಿಯನ್ ಸಮುದಾಯದ ನಡುವೆ ದ್ವೇಷ ಮತ್ತು ವಿಭಜನೆಯ ಮನೋಭಾವನೆ ಬಿತ್ತುವ ಸ್ಪಷ್ಟ ಪ್ರಯತ್ನ. ಆಸ್ಟ್ರೇಲಿಯಾದಲ್ಲಿ ತಮ್ಮ ಚಟುವಟಿಕೆಗಳನ್ನು ಖಲಿಸ್ತಾನ್ ಬೆಂಬಲಿಗರು ತೀವ್ರಗೊಳಿಸಿದ್ದಾರೆ. ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಮತ್ತು ಇತರ ಭಯೋತ್ಪಾದಕ ಸಂಘಟನೆಗಳು ಇಂತಹ ಪ್ರಕರಣಗಳಿಗೆ ಸಕ್ರಿಯ ಸಹಾಯ, ಪ್ರೋತ್ಸಾಹ ನೀಡುತ್ತಿವೆ" ಎಂದು ಹೈಕಮಿಷನ್ ಹೇಳಿದೆ. ದುಷ್ಕರ್ಮಿಗಳನ್ನು ನ್ಯಾಯಾಂಗದ ಕಟಕಟೆಗೆ ತರುವುದು ಮಾತ್ರವಲ್ಲದೇ ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೈಕಮಿಷನ್ ತಿಳಿಸಿದೆ.
ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯ, ಅವರ ಆಸ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತದ ಪ್ರಾದೇಶಿಕ ಸಮಗ್ರತೆ, ಭದ್ರತೆ, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿಯಾಗುವ ಚಟುವಟಿಕೆಗಳಿಗೆ ಆಸ್ಟ್ರೇಲಿಯಾವನ್ನು ಬಳಸಲು ಅನುಮತಿಸದಂತೆ ಹೈಕಮಿಷನ್ ಆಸ್ಟ್ರೇಲಿಯಾ ಸರ್ಕಾರವನ್ನು ಆಗ್ರಹಿಸಿದೆ. ನವದೆಹಲಿಯಲ್ಲಿರುವ ಆಸ್ಟ್ರೇಲಿಯಾದ ಹೈಕಮಿಷನ್ ಕೂಡ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದೆ.