ಕೀವ್(ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ಯುದ್ಧ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿಯ ಪ್ರಾಣಹಾನಿಗೆ ಕಾರಣವಾಗಿರುವ ಯುದ್ಧವನ್ನು ತಡೆಯಲು ಭಾರತ ತನ್ನ ಪ್ರಭಾವವನ್ನು ಬಳಸಬೇಕೆಂದು ಉಕ್ರೇನ್ ಮತ್ತೊಮ್ಮೆ ಮನವಿ ಮಾಡಿದೆ. ಇದರ ಜೊತೆಗೆ ಉಕ್ರೇನ್ ಅಧ್ಯಕ್ಷ ವೊಲೋಡಿಮೀರ್ ಝೆಲೆನ್ಸ್ಕಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಂಧಾನ ವಹಿಸುವುದಾದರೆ, ಅದನ್ನು ಸ್ವಾಗತಿಸುತ್ತೇವೆ ಎಂದು ಉಕ್ರೇನ್ನ ಸಚಿವರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಭಾರತದ ಪ್ರಧಾನಿ ಮೋದಿ ಅವರು ಎರಡೂ ದೇಶಗಳ ನಡುವೆ ಸಂಧಾನಕಾರರಾಗಲು ಬಯಸಿದರೆ, ಅವರ ಪ್ರಯತ್ನವನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ. ಜೊತೆಗೆ ಉಕ್ರೇನ್ ಭಾರತದ ಉತ್ಪನ್ನಗಳ ವಿಶ್ವಾಸಾರ್ಗಹ ಗ್ರಾಹಕ ರಾಷ್ಟ್ರವಾಗಿದೆ.
ನಾವು ಯಾವಾಗಲೂ ಭಾರತದ ಆಹಾರ ಭದ್ರತೆಯನ್ನು ಖಾತ್ರಿಪಡಿಸುವವರಲ್ಲಿ ಒಬ್ಬರಾಗಿದ್ದೇವೆ. ಏಕೆಂದರೆ ನಾನು ನಿಮಗೆ ಸೂರ್ಯಕಾಂತಿ ಎಣ್ಣೆ, ಧಾನ್ಯಗಳು ಮತ್ತು ಇತರ ಉತ್ಪನ್ನಗಳನ್ನು ಪೂರೈಸುತ್ತಿದ್ದೇವೆ ಎಂದು ಕುಲೇಬಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಷ್ಯಾದೊಂದಿಗಿನ ಸಂಬಂಧವನ್ನು ಬಳಸಿಕೊಂಡು ಭಾರತ ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸಬೇಕೆಂದು ನಾವು ಮನವಿ ಮಾಡುತ್ತೇವೆ.