ವಿಶ್ವಸಂಸ್ಥೆ:ರಷ್ಯಾದ ದಾಳಿಯಿಂದ ನಲುಗಿರುವ ಉಕ್ರೇನ್ ಬಗ್ಗೆ ಭಾರತ ವಿಶ್ವಸಂಸ್ಥೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ, ಉಭಯ ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ಯುದ್ಧ ಕೊನೆಗೊಳಿಸುವ ರಾಜತಾಂತ್ರಿಕತೆಯನ್ನು ಭಾರತ ಬೆಂಬಲಿಸಲಿದೆ ಎಂದು ತಿಳಿಸಿದೆ.
ಉಕ್ರೇನ್- ರಷ್ಯಾ ಯುದ್ಧ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಪ್ರತೀಕ್ ಮಾಥುರ್, ಉಕ್ರೇನ್‌ನ ಪರಿಸ್ಥಿತಿಯ ಬಗ್ಗೆ ಭಾರತಕ್ಕೆ ತೀವ್ರ ಕಳವಳವಿದೆ. ಘರ್ಷಣೆಯು ಜನರ ಪ್ರಾಣಹಾನಿ ಮತ್ತು ಲೆಕ್ಕವಿಲ್ಲದಷ್ಟು ಧನಹಾನಿಯನ್ನು ಉಂಟುಮಾಡಿದೆ. ಇದು ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೆ ಭಾರೀ ಪ್ರಭಾವ ಬೀರಿದೆ ಎಂದು ಹೇಳಿದರು.
ಲಕ್ಷಾಂತರ ಜನರು ನಿರಾಶ್ರಿತರಾಗುತ್ತಿದ್ದಾರೆ. ನೆರೆಯ ದೇಶಗಳಲ್ಲಿ ಆಶ್ರಯ ಪಡೆಯಲು ಅಂಗಲಾಚುತ್ತಿದ್ದಾರೆ. ಮುಗ್ಧ ಜೀವಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಎಲ್ಲ ಹಗೆತನಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ನಮ್ಮ ಅಭಿಮತ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಯುದ್ಧವನ್ನು ಕೊನೆಗಾಣಿಸಬೇಕು ಎಂದು ಅವರು ಪ್ರತಿಪಾದಿಸಿದರು.