ನವದೆಹಲಿ: ಈ ವರ್ಷದ ಏಪ್ರಿಲ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಎಸ್‌ಸಿಒ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ಸೇರಿದಂತೆ ಎಸ್‌ಸಿಒ ರಾಷ್ಟ್ರಗಳಿಗೆ ಭಾರತ ಆಹ್ವಾನ ಕಳುಹಿಸಿದೆ. ಆದರೆ ಪಾಕಿಸ್ತಾನದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ. ಎಸ್ಸಿಓ ಎಂದು ಕರೆಯಲಾಗುವ ಶಾಂಘೈ ಸಹಕಾರ ಸಂಸ್ಥೆಗೆ ಪ್ರಸ್ತುತ ಭಾರತ ದೇಶ ಅಧ್ಯಕ್ಷನಾಗಿದೆ. ಶಾಂಘೈ ಸಹಕಾರ ಸಂಸ್ಥೆ (SCO)ಯ ರಕ್ಷಣಾ ಸಚಿವರ ಸಭೆಯು ಭಾರತದ ರಾಜಧಾನಿ ನವದೆಹಲಿಯಲ್ಲಿ ಏಪ್ರಿಲ್‌ನಲ್ಲಿ ನಡೆಯಲಿದೆ.
ಎಲ್ಲಾ ದೇಶಗಳಾದ ಚೀನಾ, ಭಾರತ, ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ರಕ್ಷಣಾ ಮಂತ್ರಿಗಳಿಗೆ ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಕಳುಹಿಸಲಾಗಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಅವರಿಗೂ ಆಹ್ವಾನ ಕಳುಹಿಸಲಾಗಿದೆ. ನಾವು SCO ಅಧ್ಯಕ್ಷರಾಗಿದ್ದೇವೆ ಮತ್ತು ಎಲ್ಲ ಕಾರ್ಯಕ್ರಮಗಳಿಗೆ ಎಲ್ಲ SCO ಸದಸ್ಯರನ್ನು ಆಹ್ವಾನಿಸುತ್ತೇವೆ ಎಂದು ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ನಾವು ಎಸ್‌ಸಿಒ ಅಧ್ಯಕ್ಷರಾಗಿರುವ ಕಾರಣದಿಂದ ವಿವಿಧ ದೇಶಗಳಿಗೆ ಆಹ್ವಾನಗಳನ್ನು ಕಳುಹಿಸಲಾಗುತ್ತಿದೆ. ಆದರೆ, ಪಾಕಿಸ್ತಾನವು ಆಹ್ವಾನ ಸ್ವೀಕರಿಸಿದೆಯೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ. ಅಂಥ ಪ್ರತಿಯೊಂದು ಸಣ್ಣ ಮಾಹಿತಿಯನ್ನು ನಾನು ಗಮನಿಸುವುದಿಲ್ಲ ಎಂದು ಬಾಗ್ಚಿ ಹೇಳಿದರು. ಭಾರತವು ಪ್ರಸ್ತುತ ಎಸ್‌ಸಿಒ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದು, ಈ ವರ್ಷ ಸರಣಿ ಸಭೆಗಳನ್ನು ಆಯೋಜಿಸಲು ಸಜ್ಜಾಗಿದೆ. ಶಾಂಘೈ ಸಹಕಾರ ಸಂಸ್ಥೆಯು ಚೀನಾ, ಭಾರತ, ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅನ್ನು ಒಳಗೊಂಡಿದೆ.