ಬೀಜಿಂಗ್ (ಚೀನಾ):ಭಾರತದ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ಮೊದಲ ಬಾರಿಗೆ ಶಾಂಘೈ ಸಹಕಾರ ಸಂಘಟನೆ (Shanghai Cooperation Organisation - SCO)ಯ ಶೃಂಗಸಭೆ ನಡೆಯಲಿದೆ. ಇದಕ್ಕೂ ಮುಂಚಿತವಾಗಿ ಭಾರತವು ಮಂಗಳವಾರ ಚೀನಾ ರಾಜಧಾನಿ ಬೀಜಿಂಗ್ನಲ್ಲಿರುವ ಎಸ್ಸಿಒ ಪ್ರಧಾನ ಕಚೇರಿಯಲ್ಲಿ ತನ್ನ 'ನವದೆಹಲಿ ಹಾಲ್' ಉದ್ಘಾಟಿಸಿದೆ. ಅತ್ಯುತ್ತಮವಾಗಿ ವಿನ್ಯಾಸಗೊಳಿಸಲಾದ ಈ 'ನವದೆಹಲಿ ಹಾಲ್' ಅನ್ನು ಮಿನಿ ಭಾರತದ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಚೀನಾ, ರಷ್ಯಾ, ಕಜಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಭಾರತ ಮತ್ತು ಪಾಕಿಸ್ತಾನವನ್ನು ಒಳಗೊಂಡಿರುವ ಶಾಂಘೈ ಸಹಕಾರ ಸಂಘಟನೆಯ ಸಚಿವಾಲಯವು ಬೀಜಿಂಗ್‌ನ ಉನ್ನತ ಮಟ್ಟದ ರಾಜತಾಂತ್ರಿಕ ಪ್ರದೇಶದಲ್ಲಿದೆ. ಈಗಾಗಲೇ ಆರು ಸ್ಥಾಪಕ ಸದಸ್ಯರಾದ ಚೀನಾ, ರಷ್ಯಾ, ಕಜಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಹಾಗೂ ಉಜ್ಬೇಕಿಸ್ತಾನ್ ತಮ್ಮ ಸಂಸ್ಕೃತಿ ಮತ್ತು ವಿಶಿಷ್ಟ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುವ ಸಭಾಂಗಣಗಳನ್ನು ಹೊಂದಿವೆ. ಭಾರತವು ತನ್ನದೇ ಆದ 'ನವದೆಹಲಿ ಹಾಲ್' ಅನ್ನು ಮೊದಲ ಬಾರಿಗೆ ಆರಂಭಿಸಿದೆ.
ಈ ಬಾರಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಜುಲೈ 4ರಂದು ವರ್ಚುವಲ್ ಮೂಲಕ ಶೃಂಗಸಭೆ ನಡೆಯಲಿದೆ. ಇದಕ್ಕೂ ಮುನ್ನ ಎಸ್ಸಿಒ ಸಚಿವಾಲಯದಲ್ಲಿ ನವದೆಹಲಿ ಹಾಲ್ ತೆರೆಯಲಾಗಿದೆ. ಪಾಕಿಸ್ತಾನವು ತನ್ನ ಸಭಾಂಗಣವನ್ನು ಸ್ಥಾಪಿಸಲು ತನ್ನ ಸರದಿಗಾಗಿ ಕಾಯಬೇಕಾಗಿದೆ.
ಮಿನಿ ಇಂಡಿಯಾದ ಕಲ್ಪನೆ - ಸಚಿವ ಜೈಶಂಕರ್: ಈ ಸಮಾರಂಭ ಉದ್ದೇಶಿಸಿ ವಿಡಿಯೋ ಮೂಲಕ ಭಾಷಣ ಮಾಡಿದ ಎಸ್. ಜೈಶಂಕರ್, ಎಸ್ಸಿಒ ಸೆಕ್ರೆಟರಿಯೇಟ್‌ನಲ್ಲಿ ಇಂದು ಸೆಕ್ರೆಟರಿ ಜನರಲ್ ಮತ್ತು ಇತರ ಪ್ರತಿಷ್ಠಿತ ಸಹೋದ್ಯೋಗಿಗಳ ಉಪಸ್ಥಿತಿಯಲ್ಲಿ ನವದೆಹಲಿ ಸಭಾಂಗಣವನ್ನು ಉದ್ಘಾಟಿಸಲು ನನಗೆ ಸಂತೋಷವಾಗಿದೆ. ಎಸ್ಸಿಒ ಶೃಂಗಸಭೆಯೊಂದಿಗೆ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿರುವ ಭಾರತದ ಮೊದಲ ಅಧ್ಯಕ್ಷತೆಯಲ್ಲಿ ಹಾಲ್ ಆರಂಭಿಸಿರುವುದು ನನಗೆ ವಿಶೇಷವಾಗಿ ಸಂತೋಷವಾಗಿದೆ ಎಂದು ತಿಳಿಸಿದರು.