ಕಠ್ಮಂಡು: ಭೂಕಂಪಪೀಡಿತ ನೆರೆ ದೇಶ ನೇಪಾಳಕ್ಕೆ ತುರ್ತು ಪರಿಹಾರ ಸಾಮಗ್ರಿಗಳನ್ನು ಭಾರತ ಹಸ್ತಾಂತರಿಸಿದೆ. ಟೆಂಟ್‌ಗಳು, ಹೊದಿಕೆ, ಟಾರ್ಪಾಲಿನ್ ಶೀಟ್‌ಗಳು, ಅಗತ್ಯ ಔಷಧ ಮತ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡ 10 ಕೋಟಿ ರೂಪಾಯಿ ಮೌಲ್ಯದ ತುರ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ಭಾರತೀಯ ವಾಯುಪಡೆಯ ವಿಶೇಷ ಸಿ-130 ವಿಮಾನ ಭಾನುವಾರ ನೇಪಾಳಕ್ಕೆ ಆಗಮಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಕಠ್ಮಂಡುವಿನಲ್ಲಿನ ಭಾರತೀಯ ರಾಯಭಾರ ಕಚೇರಿ, "ತುರ್ತು ಪರಿಹಾರ ಸಾಮಗ್ರಿಗಳ ಮೊದಲ ರವಾನೆಯು ಭಾನುವಾರ ನೇಪಾಲ್‌ಗುಂಜ್‌ಗೆ ಆಗಮಿಸಿತು" ಎಂದು ತಿಳಿಸಿದೆ. ವಿಶೇಷ ಭಾರತೀಯ ವಾಯುಪಡೆ ವಿಮಾನವು ಟೆಂಟ್ ಮತ್ತು ಟಾರ್ಪಾಲಿನ್ ಶೀಟ್‌ಗಳು, ಹೊದಿಕೆಗಳು, ಮಲಗುವ ಚಾಪೆ ಸೇರಿದಂತೆ ಅಗತ್ಯ ಔಷಧಿಗಳು ಮತ್ತು ಸಂತ್ರಸ್ತಪೀಡಿತ ಜನರಿಗೆ ಪೋರ್ಟಬಲ್ ವೆಂಟಿಲೇಟರ್‌ಗಳಂತಹ ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿರುವ ತುರ್ತು ಪರಿಹಾರ ಸಾಮಗ್ರಿಗಳನ್ನು ಸಾಗಿಸಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಭಾರತ ಸರ್ಕಾರದ ಪರವಾಗಿ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಅವರು ನೇಪಾಳದ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವ ಪೂರ್ಣ ಬಹದ್ದೂರ್ ಖಡ್ಕಾ ಅವರಿಗೆ ಕರ್ನಾಲಿ ಮುಖ್ಯಮಂತ್ರಿ ರಾಜ್ ಕುಮಾರ್ ಶರ್ಮಾ ಸಮ್ಮುಖದಲ್ಲಿ ಪರಿಹಾರ ಸಾಮಗ್ರಿಗಳನ್ನು ಹಸ್ತಾಂತರಿಸಿದರು. ಭೂಕಂಪಪೀಡಿತರಿಗೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಗೆ ಅನುಗುಣವಾಗಿ ಭಾರತವು ನೆರವು ಒದಗಿಸಿದೆ.