ಲಂಡನ್: ನಾವು ಮತ್ತೊಮ್ಮೆ ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನಿರ್ಧರಿಸಿದ್ದೇವೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಪುನರುಚ್ಚರಿಸಿದರು. ಇಲ್ಲಿನ 10 ಡೌನಿಂಗ್ ಸ್ಟ್ರೀಟ್‌ನ ಗಾರ್ಡನ್ಸ್‌ನಲ್ಲಿ ಇಂಡಿಯಾ ಗ್ಲೋಬಲ್ ಫೋರಂನ ಯುಕೆ - ಇಂಡಿಯಾ ವೀಕ್ 2023 ರ ಸಂದರ್ಭದಲ್ಲಿ ವಿಶೇಷ ಸ್ವಾಗತ ಆಯೋಜಿಸಿದ್ದ ವೇಳೆ ಈ ಮಾತನ್ನು ಹೇಳಿದರು.
ಈ ಸಮಾರಂಭದಲ್ಲಿ, ರಿಷಿ ಸುನಕ್ ಅವರು ಮೇರಿ ಕೋಮ್, ಶಂಕರ್ ಮಹಾದೇವನ್, ಜಾಕಿರ್ ಹುಸೇನ್ ಮತ್ತು ಸೋನಮ್ ಕಪೂರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳನ್ನು ಭೇಟಿಯಾದರು. ಪಿಎಂ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2030 ರ ಮಾರ್ಗಸೂಚಿಯಲ್ಲಿ ನಾವು ಒಟ್ಟಿಗೆ ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ. ನಮ್ಮ ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗುವ ಮಹತ್ವಾಕಾಂಕ್ಷೆಯ ವ್ಯಾಪಾರ ಒಪ್ಪಂದವನ್ನು ನಾವು ಮಾಡಲು ಬಯಸುತ್ತಿದ್ದೇವೆ. ಇಲ್ಲಿ ಭಾರತ ಮತ್ತು ದೇಶೀಯವಾಗಿ ವ್ಯಾಪಾರಗಳು ಮತ್ತು ಗ್ರಾಹಕರಿಗೆ ಪ್ರಚಂಡ ಅವಕಾಶಗಳನ್ನು ತರುತ್ತೇವೆ ಎಂದು ಸುನಕ್ ಹೇಳಿದರು. ಈ ಕಾರ್ಯಕ್ರಮದಲ್ಲಿ ಪತ್ನಿ ಅಕ್ಷತಾ ಮೂರ್ತಿ ಮತ್ತು ಅತ್ತೆ ಸುಧಾ ಮೂರ್ತಿ ಭಾಗಿಯಾಗಿದ್ದರು. ಇದು ಕೇವಲ ಇಂಗ್ಲೆಂಡ್ - ಇಂಡಿಯಾ ವೀಕ್ ಅಲ್ಲ, ಯುಕೆಯಲ್ಲಿ ಭಾರತದ ಬೇಸಿಗೆ ಆರಂಭ ಎಂದು ಹೇಳಿದರು.
ಶುಕ್ರವಾರದವರೆಗೆ ನಡೆಯುವ ಇಂಡಿಯಾ ಗ್ಲೋಬಲ್ ಫೋರಮ್‌ನ (ಐಜಿಎಫ್) ಐದನೇ ವಾರ್ಷಿಕ ಯುಕೆ-ಇಂಡಿಯಾ ವೀಕ್, ದ್ವಿಪಕ್ಷೀಯ ಸಂಬಂಧದೊಳಗೆ ಗಮನಹರಿಸಬೇಕಾದ ಪ್ರಮುಖ ಕ್ಷೇತ್ರಗಳ ಕುರಿತು ಚರ್ಚಿಸಲು ಮಂತ್ರಿಗಳು, ವ್ಯಾಪಾರ ಮುಖಂಡರು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸುತ್ತದೆ.