ಕೊಲಂಬೊ:ತನ್ನ ದೇಶದ ಪತ್ತೇದಾರಿ ಹಡಗು ಶ್ರೀಲಂಕಾ ಬಂದರಿಗೆ ಬಂದಿದ್ದನ್ನು ತೀವ್ರವಾಗಿ ವಿರೋಧಿಸಿದ ಭಾರತದ ನಡೆಗೆ ಚೀನಾ ಕ್ರುದ್ಧಗೊಂಡಿದೆ. ಇದರಿಂದ ಭಾರತದ ವಿರುದ್ಧ "ಶ್ರೀಲಂಕಾದಲ್ಲಿ ಹಸ್ತಕ್ಷೇಪ" ಆರೋಪ ಮಾಡಿದ್ದು, ಇದಕ್ಕೆ ತಿರುಗೇಟು ನೀಡಿರುವ ಭಾರತ "ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಬೇಕಿರುವುದು ನೆರವೇ ಹೊರತು, ಅಧಿಕ ಪ್ರಸಂಗಗಳಲ್ಲ" ಎಂದಿದೆ.
ಲಂಕಾದ ಹಂಬಂಟೋಟಾ ಬಂದರಿನಲ್ಲಿ ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ಹಡಗಾದ 'ಯುವಾನ್ ವಾಂಗ್ 5' ಸಂಚಾರ ನಡೆಸಿತ್ತು. ಇದಕ್ಕೆ ಭಾರತ ಭದ್ರತೆಯ ಕಾರಣ ನೀಡಿ ಆಕ್ಷೇಪಿಸಿತ್ತು. ಇದನ್ನು ವಿರೋಧಿಸಿದ ಚೀನಾ, ಭಾರತ ನೆರೆಯ ರಾಷ್ಟ್ರದ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಅದರ ಸಾರ್ವಭೌಮತ್ವದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿತ್ತು.
ಚೀನಾದ ಹೇಳಿಕೆಯನ್ನು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ಟೀಕಿಸಿದ್ದು, ಚೀನಾ ರಾಯಭಾರಿಯ ಹೇಳಿಕೆಗಳು ಆ ದೇಶ ಇನ್ನೊಂದು ದೇಶದ ಬಗ್ಗೆ ಹೊಂದಿರುವ ಮನೋಭಾವನೆಯನ್ನು ಪ್ರತಿನಿಧಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ದ್ವೀಪರಾಷ್ಟ್ರ ಲಂಕಾಗೆ ಬೇಕಿರುವುದು ನೆರವಷ್ಟೇ. ಅದಕ್ಕೆ ಇನ್ನೊಂದು ದೇಶದ ಜೊತೆ ವಿವಾದ, ಅನಗತ್ಯ ಒತ್ತಡವನ್ನು ಬಯಸುವುದಿಲ್ಲ ಎಂದು ಟ್ವೀಟ್ ಮಾಡಿದೆ.
ಲಂಕಾದ ಹಂಬಂಟೋಟಾ ಬಂದರಿಗೆ ಯುವಾನ್ ವಾಂಗ್ 5 ಹಡಗು ಸಂಚಾರಕ್ಕೆ ಸಮ್ಮತಿಸಿದ ಶ್ರೀಲಂಕಾವನ್ನು ಚೀನಾ ಹೊಗಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭಾರತದ ವಿರುದ್ಧ ಆ ದೇಶದ ರಾಯಭಾರಿ ಪರೋಕ್ಷವಾಗಿ ಟೀಕಿಸಿ, ಇನ್ನೊಂದು ದೇಶದ ಸಾರ್ವಭೌಮತೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಭಾರತದ ಹೆಸರು ಪ್ರಸ್ತಾಪಿಸದೇ ಹೇಳಿಕೆ ನೀಡಿದ್ದರು.
ಇದನ್ನೂ ಓದಿ:ಮಧ್ಯಾಹ್ನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ರಾಹುಲ್ ಮೇಲೆ ಒತ್ತಡ, ಕೌನ್ ಬನೇಗಾ ಪ್ರೆಸಿಡೆಂಟ್?