ನವದೆಹಲಿ:ಖಲಿಸ್ತಾನಿ ವಿಚಾರವಾಗಿ ಭಾರತ ಮತ್ತು ಕೆನಡಾ ನಡುವಿನ ವಾತಾವರಣ ಹದಗೆಟ್ಟಿದ್ದು, ಅಲ್ಲಿನ ಭಾರತೀಯ ನಾಗರಿಕರಿಗೆ ಎಚ್ಚರದಿಂದಿರಲು ಕೇಂದ್ರ ಸರ್ಕಾರ ಸಲಹೆ ನೀಡಿದೆ. ಭಾರತೀಯರು, ಸಂಸ್ಥೆಗಳ ಮೇಲೆ ಕೆನಡಾದಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯ ವಿದ್ಯಾರ್ಥಿಗಳು, ನಾಗರಿಕರು ಎಚ್ಚರ ವಹಿಸಬೇಕು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಅಲ್ಲಿನ ಸರ್ಕಾರದ ಆಶ್ರಯದಲ್ಲಿ ಭಾರತ ವಿರೋಧಿ ಚಟುವಟಿಕೆಗಳು, ದ್ವೇಷಪೂರಿತ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈ ಸಮಯದಲ್ಲಿ ಕೆನಡಾಕ್ಕೆ ಪ್ರಯಾಣಿಸಲು ಯೋಜಿಸುತ್ತಿರುವವರು ತಮ್ಮ ಪ್ರಯಾಣವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಲಾಗಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಕೂಡ ಹೊರಡಿಸಿದೆ.
ಭಾರತ ವಿರೋಧಿ ಅಜೆಂಡಾ ಪರವಾಗಿರುವ ಭಾರತೀಯ ಸಮುದಾಯದ ಜನರು ಮತ್ತು ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡು ಬೆದರಿಕೆಗಳು ಬರುತ್ತಿವೆ. ಆದ್ದರಿಂದ ಹಿಂಸಾತ್ಮಕ ಘಟನೆಗಳು ನಡೆಯುವ ಪ್ರದೇಶಗಳಿಗೆ ಹೋಗದಂತೆ ವಿನಂತಿಸಲಾಗಿದೆ. ಕೆನಡಾದಲ್ಲಿರುವ ಭಾರತೀಯರು ಮತ್ತು ಭಾರತೀಯ ಸಂಘಟನೆಗಳ ಮೇಲೆ ದಾಳಿ ನಡೆಯುವ ಸಾಧ್ಯತೆಯೂ ಇದೆ ಎಂದು ಸರ್ಕಾರ ಹೇಳಿದೆ.
ಹೆಸರು ನೋಂದಾಯಿಸಿ ;ಕೆನಡಾದಲ್ಲಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಭಾರತೀಯ ಹೈಕಮಿಷನ್ ಮತ್ತು ಕಾನ್ಸುಲೇಟ್ ಜನರಲ್ ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲಿನ ಪ್ರತಿಕೂಲ ವಾತಾವರಣ ಗಮನದಲ್ಲಿಟ್ಟುಕೊಂಡು ನಾಗರಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ.