ವಾಷಿಂಗ್ಟನ್, ಅಮೆರಿಕ:ಅಮೆರಿಕ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಮ್ (ಯುಎಸ್ಐಎಸ್ಪಿಎಫ್) ಸಮಾರಂಭದಲ್ಲಿ ಮಾತನಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾರತೀಯ ವಲಸಿಗರನ್ನು ಭೇಟಿ ಮಾಡಲು ವಾಷಿಂಗ್ಟನ್‌ನ ರೇಗನ್ ಸೆಂಟರ್‌ಗೆ ತೆರಳಿದರು. ಮೊದಲಿಗೆ ರೇಗನ್ ಸೆಂಟರ್‌ನಲ್ಲಿ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಗಾಯಕಿ ಮೇರಿ ಮಿಲ್ಬೆನ್ ಭಾರತದ ರಾಷ್ಟ್ರಗೀತೆಯನ್ನು ಹಾಡಿದರು. ಪ್ರಧಾನಿ ಮೋದಿ ರಾಷ್ಟ್ರಗೀತೆಗೆ ಗೌರವ ಸೂಚಿಸಿದರು.
ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಒಂದು ರೀತಿಯಲ್ಲಿ ನೀವು ಈ ಸಭಾಂಗಣದಲ್ಲಿ ಸೇರಿರುವುದರಿಂದ ಭಾರತದ ಸಂಪೂರ್ಣ ನಕ್ಷೆಯಂತೆ ಗೋಚರಿಸುತ್ತಿದೆ. ನಾನು ಇಲ್ಲಿ ಭಾರತದ ಮೂಲೆ ಮೂಲೆಗಳಿಂದ ಬಂದ ಜನರನ್ನು ಕಾಣುತ್ತಿದ್ದೇನೆ. ಈ ವೇಳೆ ಈ ಸ್ಥಳ ಒಂದು ರೀತಿ ಮಿನಿ ಇಂಡಿಯಾ ಥರ ಕಾಣುತ್ತಿದೆ ಎಂದರು.
ಅಮೆರಿಕದಲ್ಲಿ 'ಏಕ್ ಭಾರತ್, ಶ್ರೇಷ್ಠ್ ಭಾರತ್' ಅಂತಹ ಸುಂದರವಾದ ಚಿತ್ರವನ್ನು ತೋರಿಸಿದ್ದಕ್ಕಾಗಿ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅಮೆರಿಕದಲ್ಲಿ ನನಗೆ ಸಿಗುತ್ತಿರುವ ಪ್ರೀತಿಯ ಪ್ರಮಾಣ ಅದ್ಭುತವಾಗಿದೆ. ಎಲ್ಲಾ ಕ್ರೆಡಿಟ್ ಈ ದೇಶದ ಜನರಿಗೆ ಸಲ್ಲುತ್ತದೆ. ಅಧ್ಯಕ್ಷ ಬೈಡನ್ ಮತ್ತು ನಾನು ಕಳೆದ 3 ದಿನಗಳಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಅವರೊಬ್ಬರು ಅನುಭವಿ ರಾಜಕಾರಣಿ ಎಂದೇ ಹೇಳಬಹುದು. ಅವರು ಯಾವಾಗಲೂ ಭಾರತ- ಅಮೆರಿಕ ಪಾಲುದಾರಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ ಅಂತಾ ಮೋದಿ ಅವರು ಹೇಳಿದರು.
ತಂತ್ರಜ್ಞಾನ ವರ್ಗಾವಣೆ- ಉತ್ಪಾದನೆಯಲ್ಲಿ ಸಹಕಾರ:ಈ 3 ದಿನಗಳಲ್ಲಿ ಭಾರತ ಮತ್ತು ಯುಎಸ್ ಸಂಬಂಧಗಳ ಹೊಸ ಮತ್ತು ಗೌರವಾತೀರ್ಥ ಪ್ರಯಾಣವು ಪ್ರಾರಂಭವಾಗಿದೆ. ಈ ಹೊಸ ಪ್ರಯಾಣವು ಜಾಗತಿಕ ಕಾರ್ಯತಂತ್ರದ ವಿಷಯಗಳ ಮೇಲೆ ನಮ್ಮ ಒಮ್ಮುಖವಾಗಿದೆ. ಅಷ್ಟೇ ಅಲ್ಲ ಮೇಕ್ ಇನ್ ಇಂಡಿಯಾ ಮೇಕ್ ಫಾರ್ ದಿ ವರ್ಲ್ಡ್ ಆಗಿ ರೂಪಿಸಲು ನಮ್ಮ ಸಹಕಾರ ಇದೆ. ಅದು ತಂತ್ರಜ್ಞಾನ ವರ್ಗಾವಣೆ ಮತ್ತು ಉತ್ಪಾದನೆಯಾಗಿರಲಿ ನಾವು ಕೈಜೋಡಿಸಲಿದ್ದೇವೆ. ಕೈಗಾರಿಕಾ ಪೂರೈಕೆ ಸರಪಳಿಯಲ್ಲಿ ಸಹಕಾರ ಅಥವಾ ಸಮನ್ವಯವನ್ನು ಹೆಚ್ಚಿಸಿ, ಎರಡೂ ರಾಷ್ಟ್ರಗಳು ಉತ್ತಮ ಭವಿಷ್ಯದತ್ತ ಬಲವಾದ ಹೆಜ್ಜೆಗಳನ್ನು ಇಡುತ್ತಿವೆ. ಭಾರತದಲ್ಲಿ ಯುದ್ಧ ವಿಮಾನಗಳನ್ನು ತಯಾರಿಸುವ ಜನರಲ್ ಎಲೆಕ್ಟ್ರಿಕ್ ಕಂಪನಿಯ ನಿರ್ಧಾರವು ಭಾರತದ ರಕ್ಷಣಾ ವಲಯಕ್ಕೆ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಅಂತಾ ಪ್ರಧಾನಿ ಮೋದಿ ಹೇಳಿದರು.
ರಕ್ಷಣಾ ಕೈಗಾರಿಕಾ ಸಹಕಾರ ಮಾರ್ಗಸೂಚಿಯು ಉಭಯ ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಗಾಢಗೊಳಿಸುತ್ತದೆ. ನನ್ನ ಭೇಟಿಯ ಸಮಯದಲ್ಲಿ, ಗೂಗಲ್ ಮೈಕ್ರಾನ್, ಅಪ್ಲೈಡ್ ಮೆಟೀರಿಯಲ್ಸ್ ಮತ್ತು ಇತರ ಕಂಪನಿಗಳು ಭಾರತದಲ್ಲಿ ಭಾರಿ ಹೂಡಿಕೆ ಮಾಡಲು ಘೋಷಿಸಿವೆ. ಈ ಎಲ್ಲಾ ಘೋಷಣೆಗಳು ಭಾರತದಲ್ಲಿ ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಭಾರತ ಮತ್ತು ಯುಎಸ್ ನಡುವೆ ಸಹಿ ಹಾಕಲಾದ ಆರ್ಟೆಮಿಸ್ ಒಪ್ಪಂದವು ಬಾಹ್ಯಾಕಾಶ ಸಂಶೋಧನೆಯಲ್ಲಿ ಹಲವಾರು ಅವಕಾಶಗಳನ್ನು ಒದಗಿಸುತ್ತದೆ. ನಾಸಾದೊಂದಿಗೆ ಭಾರತವು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ. ಈ ಒಂದು ಕಾರ್ಯಕ್ಕೆ ನಾನು 'Sky is not the limit' ಎಂದಿದ್ದೇನೆ ಅಂತಾ ಪ್ರಧಾನಿ ಮೋದಿ ಉಚ್ಚರಿಸಿದರು.