ಕೀವ್ (ಉಕ್ರೇನ್):ಮೂರು ತಿಂಗಳು ಸುಮ್ಮನಿದ್ದ ರಷ್ಯಾ ಕ್ರಿಮಿಯಾ ಸೇತುವೆ ಧ್ವಂಸದ ಬಳಿಕ ಮತ್ತೆ ಸಿಡಿದೆದ್ದಿದ್ದು, ಉಕ್ರೇನ್ ಮೇಲೆ ಸಿಡಿತಲೆಗಳ ಸುರಿಮಳೆ ಸುರಿಸುತ್ತಿದೆ. ಇದರಿಂದ ಉಕ್ರೇನ್ ಬೆಂಕಿಯ ಜ್ವಾಲೆಗೆ ಮತ್ತೆ ಧಗಧಗಿಸುತ್ತಿದೆ. ಪರಿಸ್ಥಿತಿ ವಿಷಮಿಸುತ್ತಿರುವ ಕಾರಣ ಆ ದೇಶಕ್ಕೆ ಅಗತ್ಯವಿಲ್ಲದಿದ್ದರೆ ಭಾರತೀಯ ಪ್ರಜೆಗಳು ಪ್ರಯಾಣ ಬೆಳೆಸದಿರಲು ಅಲ್ಲಿನ ಭಾರತೀಯ ರಾಯಭಾರ ಕಚೇರಿ ಕೋರಿದೆ.
ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾಗರಿಕರಿಗೆ ಉಕ್ರೇನಿಯನ್ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ನೀಡಿರುವ ಸುರಕ್ಷತೆ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಿದ್ದಲ್ಲದೇ, ಉಕ್ರೇನ್‌ಗೆ ಬರುವ ಮತ್ತು ಅಲ್ಲಿಗೆ ತೆರಳುವ ಯಾವುದೇ ಅನಿವಾರ್ಯವಲ್ಲದ ಪ್ರಯಾಣವನ್ನು ನಿಲ್ಲಿಸಿ ಎಂದು ತಿಳಿಸಿದೆ.
ಉಕ್ರೇನ್ನಲ್ಲಿ ಉಳಿದುಕೊಂಡಿರುವ ಭಾರತೀಯರು ಕಚೇರಿ ಮಾಹಿತಿ ನೀಡಿದಲ್ಲಿ ಅಗತ್ಯವಿದ್ದಲ್ಲಿ ಅವರನ್ನು ತಲುಪುವ ಯತ್ನ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುದ್ಧ ನಿಲ್ಲಿಸಲು ಭಾರತ ಕರೆ:ಇನ್ನು, ಉಭಯ ದೇಶಗಳ ಮಧ್ಯೆ ನಿರಂತರವಾಗಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಭಾರತ ಮತ್ತೆ ಕರೆ ನೀಡಿದೆ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದೆ. ಹಗೆತನ ಯಾರ ಹಿತಾಸಕ್ತಿಯೂ ಬಯಸುವುದಿಲ್ಲ. ತಕ್ಷಣವೇ ಇದನ್ನು ನಿಲ್ಲಿಸಿ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಹಾದಿಗೆ ಮರಳಬೇಕು. ಯುದ್ಧ ನಿಲುಗಡೆ ವಿಚಾರದಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಭಾರತ ಮಾಡಲಿದೆ ಎಂದು ತಿಳಿಸಿದೆ.
ಕ್ರಿಮಿಯಾ ಮತ್ತು ರಷ್ಯಾ ಸಂಪರ್ಕ ಸಾಧಿಸುವ ಸೇತುವೆಯನ್ನು ಉಕ್ರೇನ್ ಬಾಂಬ್ ದಾಳಿ ನಡೆಸಿ ಶನಿವಾರದಂದು ನಾಶ ಮಾಡಿತ್ತು. ಇದರಿಂದ ರಷ್ಯಾ ತನ್ನ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡುವುದನ್ನು ತಡೆದಿತ್ತು. ಇದರಿಂದ ಕುಪಿತಗೊಂಡ ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಿಸೈಲ್ಗಳನ್ನು ಬಳಸಿ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಲು ಸೂಚಿಸಿದ್ದು, ನಿನ್ನೆಯಿಂದ ಉಕ್ರೇನ್ ಪ್ರದೇಶಗಳು ಹೊತ್ತಿ ಉರಿಯುತ್ತಿವೆ.
ರಷ್ಯಾದ ಭೀಕರ ದಾಳಿಯಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, ಖಾರ್ಕಿವ್, ಎಲ್ವಿವ್, ಮೈಕೊಲೈವ್ ಮತ್ತು ಡ್ನಿಪ್ರೊಪೆಟ್ರೋವ್ಸ್ಕ್‌ನಲ್ಲಿ ಕ್ಷಿಪಣಿ ಮತ್ತು ರಾಕೆಟ್ ದಾಳಿಗಳನ್ನು ಮಾಡಲಾಗಿದೆ.
ಓದಿ:ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಭೀಕರ ಬಾಂಬಿಂಗ್: ಹಲವರ ಸಾವು