ಇಸ್ಲಾಮಾಬಾದ್( ಪಾಕಿಸ್ತಾನ):ಪಾಕಿಸ್ತಾನದಲ್ಲಿ ರಾಜಕೀಯ ತಲ್ಲಣ ಸೃಷ್ಟಿಯಾಗಿದೆ. ಸೇನಾ ಬೆಂಬಲದಿಂದಲೇ ಅಧಿಕಾರಕ್ಕೆ ಬಂದಿದ್ದ ಇಮ್ರಾನ್ ಖಾನ್, ಸೇನೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಕಳೆದ ವರ್ಷದಿಂದಲೇ ಖಾನ್ ರಾಜೀನಾಮೆಗೆ ಸೇನೆ ಸೂಚಿಸಿದೆ ಎಂಬ ವರದಿಗಳು ಆಗಾಗ ಹೊರಬೀಳುತ್ತಲೇ ಇದ್ದವು. ಆದರೂ ಇಮ್ರಾನ್ ಖಾನ್ ತಲೆ ಕೆಡಿಸಿಕೊಂಡಿರಲಿಲ್ಲ. ಆದರೀಗ ಸ್ವಪಕ್ಷೀಯರು, ಮಿತ್ರ ಪಕ್ಷಗಳು ಇಮ್ರಾನ್ ವಿರುದ್ಧ ತಿರುಗಿ ಬಿದ್ದಿವೆ.
ಪರಿಣಾಮ ಪಾಕಿಸ್ತಾನ ಸಂಸತ್ನಲ್ಲಿ ಖಾನ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. ಅವರ ರಾಜಕೀಯ ಜೀವನವನ್ನೂ ಕೊನೆಗೊಳಿಸುವ ಉದ್ದೇಶದಿಂದ ಅಖಾಡಕ್ಕಿಳಿದಿವೆ. ಸ್ವಪಕ್ಷೀಯರು ಹಾಗೂ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿರುವ ಇಮ್ರಾನ್ ಖಾನ್, ಅವಿಶ್ವಾಸ ನಿರ್ಣಯ ಮಂಡನೆ ಹಿಂದೆ ವಿದೇಶೀ ಸರ್ಕಾರಗಳ ಕೈವಾಡ ಇದೆ ಎಂದು ನೇರ ಆರೋಪ ಮಾಡಿದ್ದು, ಅವರೊಂದಿಗೆ ಕೈ ಜೋಡಿಸಿದವರನ್ನ ದೇಶದ್ರೋಹಿಗಳು ಎಂದು ಜರಿದಿದ್ದಾರೆ.
ನಾಳೆಯೇ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ಇದೆ. ಇಮ್ರಾನ್ ಖಾನ್ಗೆ ಪಾಕ್ ಸಂಸತ್ನಲ್ಲಿ ಸಂಖ್ಯಾ ಬಲ ಕೊರತೆ ಇದ್ದರೂ ಖಾನ್ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದಾರೆ.
ಪ್ರತಿಪಕ್ಷಗಳಿಗೆ ಪಿಟಿಐ ಮಿತ್ರಪಕ್ಷಗಳಿಂದ ಬೆಂಬಲ:ವಿರೋಧ ಪಕ್ಷಗಳು ಈಗಾಗಲೇ ಆಡಳಿತಾರೂಢ ಪಿಟಿಐ ಪಕ್ಷದ ಮಿತ್ರಪಕ್ಷಗಳ ಬೆಂಬಲವನ್ನು ಪಡೆದುಕೊಂಡಿವೆ. ಅಷ್ಟೇ ಅಲ್ಲ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ನಿಂದ ಪಕ್ಷಾಂತರಗೊಂಡವರು ಅವಿಶ್ವಾಸ ನಿರ್ಣಯದ ಪರ ಮತ ಹಾಕಲು ನಿರ್ಧರಿಸಿದ್ದಾರೆ.
ಪಾಕ್ ಸಂಸತ್ನಲ್ಲಿ ಪಕ್ಷಗಳ ಬಲಾಬಲ:342 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಸರ್ಕಾರ ಉಳಿಸಿಕೊಳ್ಳಲು ಸರಳ ಬಹುಮತವಾದ 172 ಮತಗಳನ್ನು ಪಡೆಯಲೇಬೇಕಿದೆ. ಆದರೆ ಇಮ್ರಾನ್ ಖಾನ್ ಸರಳ ಬಹುಮತಕ್ಕೆ ಬೇಕಾದ ಮತಗಳನ್ನು ಪಡೆಯುವುದು ಅಸಾಧ್ಯ ಎಂದೇ ಹೇಳಲಾಗುತ್ತಿದೆ. ವಿರೋಧ ಪಕ್ಷದ ಬಲ 164 ಇದೆ. ಆದರೆ ಅವುಗಳು ತಮ್ಮ ಬಲವನ್ನು ಈಗ 175 ಹೆಚ್ಚಿಸಿಕೊಂಡಿವೆ.