ಕರ್ನಾಟಕ

karnataka

ETV Bharat / international

ಪಕ್ಷದ 'ಬ್ಯಾಟ್' ಚಿಹ್ನೆ ರದ್ದು: ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಮತ್ತೊಂದು ಹಿನ್ನಡೆ - ತೆಹ್ರೀಕ್ ಎ ಇನ್ಸಾಫ್

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಬ್ಯಾಟ್​ ಚಿಹ್ನೆಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

Imran Khan-led PTI loses iconic 'bat' electoral symbol
Imran Khan-led PTI loses iconic 'bat' electoral symbol

By PTI

Published : Jan 14, 2024, 2:32 PM IST

ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಆಂತರಿಕ ಚುನಾವಣೆಗಳನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಶನಿವಾರ ತಡರಾತ್ರಿ ಅಸಿಂಧು ಎಂದು ಘೋಷಿಸಿದ್ದು, ಪಕ್ಷದ ಚುನಾವಣಾ ಚಿಹ್ನೆಯಾಗಿರುವ 'ಬ್ಯಾಟ್' ಅನ್ನು ರದ್ದುಗೊಳಿಸಿದೆ. ಪೇಶಾವರ ಹೈಕೋರ್ಟ್ (ಪಿಎಚ್​ಸಿ) ನ ದ್ವಿಸದಸ್ಯ ಪೀಠವು ಬುಧವಾರ ಕ್ರಿಕೆಟ್ ಬ್ಯಾಟ್ ಅನ್ನು ಪಿಟಿಐ ಪಕ್ಷದ ಚುನಾವಣಾ ಚಿಹ್ನೆಯಾಗಿ ಪುನಃಸ್ಥಾಪಿಸಿತ್ತು. ಈ ತೀರ್ಪನ್ನು ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿತ್ತು.

ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ, ನ್ಯಾಯಮೂರ್ತಿ ಮುಹಮ್ಮದ್ ಅಲಿ ಮಝರ್ ಮತ್ತು ನ್ಯಾಯಮೂರ್ತಿ ಮುಸಾರತ್ ಹಿಲಾಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಚುನಾವಣಾ ಆಯೋಗದ ಅರ್ಜಿಯನ್ನು ಆಲಿಸಿತು ಮತ್ತು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಶನಿವಾರ ತಡರಾತ್ರಿ ಈ ಬಗ್ಗೆ ತೀರ್ಪು ಪ್ರಟಿಸಿರುವ ಸುಪ್ರೀಂ ಕೋರ್ಟ್​, ಪಿಟಿಐನ ಬ್ಯಾಟ್​ ಚಿಹ್ನೆಯನ್ನು ರದ್ದುಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿಗಳು ಓದಿದ ತೀರ್ಪಿನಲ್ಲಿ, ಉನ್ನತ ನ್ಯಾಯಾಲಯವು ಪಿಎಚ್​ಸಿ ತೀರ್ಪನ್ನು ಅನೂರ್ಜಿತಗೊಳಿಸುವುದಾಗಿ ಮತ್ತು ಪಿಟಿಐ ಆಂತರಿಕ ಚುನಾವಣೆಗಳನ್ನು ಅಸಿಂಧುಗೊಳಿಸಿದ ಮತ್ತು ಪಕ್ಷದ ಚಿಹ್ನೆಯಾಗಿ 'ಬ್ಯಾಟ್' ಅನ್ನು ಹಿಂಪಡೆದ ಇಸಿಪಿ ತೀರ್ಪನ್ನು ಪುನಃಸ್ಥಾಪಿಸುವುದಾಗಿ ಘೋಷಿಸಿತು.

ಡಿಸೆಂಬರ್ 22 ರಂದು ಚುನಾವಣಾ ಆಯೋಗವು ಫೆಬ್ರವರಿ 8ರ ಚುನಾವಣೆಗೆ ಪಕ್ಷದ ಚುನಾವಣಾ ಚಿಹ್ನೆಯನ್ನು ಹಿಂಪಡೆದ ನಂತರ ಈ ಬಗ್ಗೆ ವಿವಾದ ಪ್ರಾರಂಭವಾಗಿತ್ತು. ಇಸಿಪಿ ತೀರ್ಪು ಪ್ರಶ್ನಿಸಿ ಪಕ್ಷವು ಪೇಶಾವರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಡಿಸೆಂಬರ್ 26ರಂದು ಮಧ್ಯಂತರ ಆದೇಶ ನೀಡಿದ್ದ ಪೇಶಾವರ ಹೈಕೋರ್ಟ್​ ಇಸಿಪಿ ತೀರ್ಪನ್ನು ವಜಾ ಮಾಡಿತ್ತು.

ಆದಾಗ್ಯೂ, ಈ ನಿರ್ಧಾರವನ್ನು ಚುನಾವಣಾ ಆಯೋಗವು ಪ್ರಶ್ನಿಸಿದ ನಂತರ ಹೈಕೋರ್ಟ್ ಜನವರಿ 3ರಂದು ತನ್ನ ತೀರ್ಪನ್ನು ಹಿಂತೆಗೆದುಕೊಂಡಿತ್ತು. ಇಬ್ಬರು ಸದಸ್ಯರ ನ್ಯಾಯಾಧೀಶರ ಸಮಿತಿಯು ಪಿಟಿಐ ಬ್ಯಾಟ್ ಚಿಹ್ನೆಯ ವಿಷಯದ ಬಗ್ಗೆ ವಿಚಾರಣೆ ನಡೆಸಲಿದೆ ಎಂದು ಪಿಎಚ್​ಸಿ ಘೋಷಿಸಿತ್ತು. ಇಬ್ಬರು ಸದಸ್ಯರ ಸಮಿತಿಯು 'ಬ್ಯಾಟ್' ಅನ್ನು ಪಿಟಿಐನ ಚಿಹ್ನೆಯಾಗಿ ಮರುಸ್ಥಾಪಿಸಿತ್ತು. ಆದರೆ ಇಸಿಪಿ ಅದನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿತ್ತು.

ಬ್ಯಾಟ್ ಪಿಟಿಐನ ಸಾಂಪ್ರದಾಯಿಕ ಚಿಹ್ನೆಯಾಗಿದೆ. ಈಗ ಪಕ್ಷದ ಪ್ರಾತಿನಿಧಿಕ ಚಿಹ್ನೆಯನ್ನು ರದ್ದು ಮಾಡಿದ್ದರಿಂದ ಅದರ ಅಭ್ಯರ್ಥಿಗಳು ಪ್ರತ್ಯೇಕ ಚಿಹ್ನೆಗಳಲ್ಲಿ ಸ್ಪರ್ಧಿಸಬೇಕಾಗುತ್ತದೆ. ಇದು ಚುನಾವಣೆಯ ದಿನದಂದು ಪಕ್ಷದ ಬೆಂಬಲಿಗರಲ್ಲಿ ಗೊಂದಲ ಸೃಷ್ಟಿಸಬಹುದು ಎನ್ನಲಾಗಿದೆ. ಸಾಮಾನ್ಯ ಚಿಹ್ನೆಯಿಲ್ಲದ ಕಾರಣದಿಂದ, ಚುನಾವಣೆಯಲ್ಲಿ ಗೆದ್ದ ಸ್ಥಾನಗಳ ಅನುಪಾತದ ಪ್ರಾತಿನಿಧ್ಯದ ಆಧಾರದ ಮೇಲೆ ಪಕ್ಷಗಳಾಗಿ ವಿಂಗಡಿಸಲಾದ ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳಲ್ಲಿನ ಮೀಸಲು ಸ್ಥಾನಗಳಲ್ಲಿ ಪಿಟಿಐಗೆ ಪಾಲು ಸಿಗದಂತಾಗಿದೆ. ಈ ಮೂಲಕ ಮಾಜಿ ಪ್ರಧಾನಿ ಹಾಗೂ ಪಿಟಿಐನ ಮುಖ್ಯಸ್ಥ ಇಮ್ರಾನ್ ಖಾನ್ ಅವರಿಗೆ ಮತ್ತೊಂದು ರಾಜಕೀಯ ಹಿನ್ನಡೆ ಉಂಟಾಗಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಪಿಟಿಐ ಮುಖಂಡ ಅಲಿ ಜಾಫರ್, ಇತಿಹಾಸವೇ ಉನ್ನತ ನ್ಯಾಯಾಲಯದ ತೀರ್ಪನ್ನು ನಿರ್ಣಯಿಸಲಿದೆ. ಆದರೆ ಅದರ ತಕ್ಷಣದ ಪರಿಣಾಮವಾಗಿ ಪಿಟಿಐ ಅಭ್ಯರ್ಥಿಗಳು ಸಾಮಾನ್ಯ ಚಿಹ್ನೆಯಿಲ್ಲದೆ ಸ್ಪರ್ಧಿಸಬೇಕಾಗುತ್ತದೆ ಎಂದು ಹೇಳಿದರು. ನ್ಯಾಯಾಲಯವು ಚಿಹ್ನೆಯನ್ನು ರದ್ದು ಮಾಡಿದರೂ ನಮ್ಮ ಪಕ್ಷವು ಈಗಲೂ ನೋಂದಾಯಿತ ಪಕ್ಷವಾಗಿದೆ. ಪ್ರಸ್ತುತ ನಮ್ಮ ನೀತಿಯ ಪ್ರಕಾರ ನಮ್ಮ ಎಲ್ಲಾ ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಮಾಲ್ಡೀವ್ಸ್‌: ಮಾಲೆ ಮೇಯರ್ ಚುನಾವಣೆಯಲ್ಲಿ ಭಾರತ ಪರವಾಗಿರುವ ಪಕ್ಷಕ್ಕೆ ಭರ್ಜರಿ ಗೆಲುವು

ABOUT THE AUTHOR

...view details